
ದಾವಣಗೆರೆ: ದಾವಣಗೆರೆಯಲ್ಲಿ ಮಾರ್ಚ್ 25 ರಂದು ವಿಜಯ ಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭ ನಡೆಯಲಿದ್ದು, ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ.
ಮಾರ್ಚ್ 1 ರಿಂದ ರಾಜ್ಯದ ನಾಲ್ಕು ಭಾಗಗಳಿಂದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಆರಂಭವಾಗಿದ್ದು, ದಾವಣಗೆರೆಯಲ್ಲಿ ನಾಲ್ಕು ರಥಗಳು ಮಹಾಸಂಗಮಗೊಳ್ಳಲಿವೆ. ಮಾರ್ಚ್ 25 ರಂದು ನಡೆಯುವ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದು, ದಾವಣಗೆರೆಯ ಜಿಎಂಐಟಿ ಕಾಲೇಜು ಹಿಂಭಾಗದ 400 ಎಕರೆ ಪ್ರದೇಶದಲ್ಲಿ ಕಾರ್ಯಕ್ರಮ ನಡೆಯಲಿದೆ.
ಬೃಹತ್ ವೇದಿಕೆ ನಿರ್ಮಾಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೂಮಿ ಪೂಜೆ ನೆರವೇರಿಸಿದ್ದಾರೆ. ಮಾರ್ಚ್ 25ರಂದು ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸಮಾರೋಪ ನಡೆಯಲಿದ್ದು, ಇಲ್ಲಿಂದಲೇ ವಿಜಯ ದುಂದುಭಿ ಬಾರಿಸುತ್ತೇವೆ. ಕಾರ್ಯಕ್ರಮದಲ್ಲಿ 7 -10 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದು ಕಟೀಲ್ ಹೇಳಿದ್ದಾರೆ.