ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಸಿಎಂ ಯಡಿಯೂರಪ್ಪ ರಾಜೀನಾಮೆ ವಿಚಾರವಾಗಿ ವಿವಿಧ ಆಯಾಮಗಳಲ್ಲಿ ಚರ್ಚೆಗಳು ಶುರುವಾಗಿದೆ. ಯಡಿಯೂರಪ್ಪ ರಾಜೀನಾಮೆಯಿಂದ ಪಕ್ಷಕ್ಕಿರುವ ಲಾಭ – ನಷ್ಟಗಳು, ಯಡಿಯೂರಪ್ಪ ರಾಜಕೀಯ ಭವಿಷ್ಯ ಹೀಗೆ ನಾನಾ ವಿಚಾರಗಳು ಮುನ್ನಲೆಗೆ ಬಂದಿದೆ.
ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿರುವ ಯಡಿಯೂರಪ್ಪ ಅಪಾರ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ದಕ್ಷಿಣ ಭಾರತದಲ್ಲಿ ಕೇಸರಿ ಧ್ವಜವನ್ನ ಹಾರಿಸುವಲ್ಲಿ ಯಡಿಯೂರಪ್ಪ ಇನ್ನಿಲ್ಲದ ಕಷ್ಟವನ್ನ ಅನುಭವಿಸಿದ್ದಾರೆ. ಆದರೆ ಇದೀಗ ಪಕ್ಷವನ್ನ ಅಧಿಕಾರಕ್ಕೆ ತರುವಲ್ಲಿ ಮುಂದಾಳತ್ವ ವಹಿಸಿರುವ ಯಡಿಯೂರಪ್ಪರನ್ನೇ ಅಧಿಕಾರದ ಗದ್ದುಗೆಯಿಂದ ಇಳಿಸೋದು ಬಿಜೆಪಿಗೆ ಸುಲಭವಾದ ಕೆಲಸವಂತೂ ಅಲ್ಲವೇ ಅಲ್ಲ.
ಯಡಿಯೂರಪ್ಪ ರಾಜೀನಾಮೆಯಿಂದ ಪಕ್ಷದ ಒಗ್ಗಟ್ಟು ಒಡೆಯುತ್ತಾ..? ಕಾರ್ಯಕರ್ತರು ಹೈಕಮಾಂಡ್ ವಿರುದ್ಧ ಮುಗಿಬೀಳ್ತಾರಾ..? ಲಿಂಗಾಯತ ಸಮುದಾಯದ ಜನತೆ ಬಿಜೆಪಿ ವಿರುದ್ಧ ಸಿಡಿದೇಳ್ತಾರಾ ಹೀಗೆ ನಾನಾ ಸವಾಲುಗಳು ಬಿಜೆಪಿಯ ಮುಂದಿದೆ. ಇದೇ ಕಾರಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋವನ್ನ ಬೇಕಂತಲೇ ಬಿಜೆಪಿ ವೈರಲ್ ಮಾಡಿತ್ತಾ ಎಂಬ ಗುಮಾನಿ ಶುರುವಾಗಿದೆ.
ಈ ಆಡಿಯೋದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅನಾಮಿಕ ವ್ಯಕ್ತಿಯೊಂದಿಗೆ ಸಿಎಂ ಬದಲಾವಣೆ ಕುರಿತಂತೆ ಮಾತನಾಡಿದ್ದರು. ದೆಹಲಿಯಿಂದ ಹೊಸ ಸಿಎಂ ಬರ್ತಾರೆ. ಈಶ್ವರಪ್ಪ ಹಾಗೂ ಶೆಟ್ಟರ್ ಕಾಲ ಅಂತ್ಯ ಎಂತಲೂ ಹೇಳಿದ್ದರು. ಈ ರೀತಿಯ ವಿಚಾರವನ್ನ ಬಹಿರಂಗ ಮಾಡಿದರೆ ಜನರ ಪ್ರತಿಕ್ರಿಯೆ ಹೇಗಿರುತ್ತೆ. ಯಾವೆಲ್ಲ ರೀತಿಯಲ್ಲಿ ಸಂಚಲನ ಉಂಟಾಗಲಿದೆ ನೋಡೋಣ ಎಂತಲೇ ಹೀಗೆ ಮಾಡಲಾಗಿತ್ತಾ ಎಂಬ ಅನುಮಾನ ಕೂಡ ರಾಜಕೀಯ ವಲಯದಲ್ಲಿ ಹರಿದಾಡುತ್ತಿರೋದಂತೂ ಸುಳ್ಳಲ್ಲ.