ಮೆಕ್ಸಿಕೋ ನಗರದಲ್ಲಿ ಸುರಕ್ಷಿತ ಸೈಕ್ಲಿಂಗ್ ಸೌಲಭ್ಯಕ್ಕಾಗಿ ಸೈಕ್ಲಿಸ್ಟ್ ಗಳು ಬೆತ್ತಲಾಗಿ ಸೈಕಲ್ ಸವಾರಿ ಮಾಡಿದ್ದು, ರಸ್ತೆ ಸುರಕ್ಷತೆಗೆ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.
ಶನಿವಾರ ಮೆಕ್ಸಿಕೋ ನಗರದಲ್ಲಿ ಈ ರೀತಿ ಪ್ರತಿಭಟನೆ ನಡೆಸಲಾಗಿದ್ದು, ಮೆಕ್ಸಿಕನ್ ರಾಜಧಾನಿಯಲ್ಲಿನ ಕೆಲವು ಜನನಿಬಿಡ ಮಾರ್ಗಗಳ ಮೂಲಕ ಬೆತ್ತಲೆಯಾಗಿ ಪೆಡಲ್ ತುಳಿಯುವ ಮೂಲಕ ಮೆರವಣಿಗೆ ಮಾಡಿದ್ದಾರೆ.
COVID-19 ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳಲ್ಲಿ ಇದು ಮೊದಲ ವಿಶ್ವ ನೇಕೆಡ್ ಬೈಕ್ ರೈಡ್(WNBR) ಆಗಿದೆ. ಕ್ರಾಂತಿಯ ಸ್ಮಾರಕದಲ್ಲಿ ಒಟ್ಟುಗೂಡಿದ ಪ್ರತಿಭಟನಾಕಾರರು ಐತಿಹಾಸಿಕ ಕೇಂದ್ರ ಮತ್ತು ಪೇಸ್ ಡೆ ಲಾ ರಿಫಾರ್ಮಾ ಅವೆನ್ಯೂದ ಬೀದಿಗಳಲ್ಲಿ ಸಂಚರಿಸುವ ಮೂಲಕ ಸುಮಾರು 17 ಕಿಲೋಮೀಟರ್ ಸೈಕಲ್ ಸವಾರಿ ಮಾಡಿದರು.
ನಗರಾಡಳಿತವು ಹಲವಾರು ವರ್ಷಗಳಿಂದ ಸೈಕಲ್ ಬಳಕೆಗೆ ಉತ್ತೇಜನ ನೀಡುತ್ತಿದ್ದರೂ, ಪಾದಚಾರಿಗಳು ಮತ್ತು ಸೈಕ್ಲಿಸ್ಟ್ ಗಳ ಸುರಕ್ಷತೆಯ ಬಗ್ಗೆ ಕ್ರಮಕೈಗೊಂಡಿಲ್ಲ. ಇನ್ನೂ ಜಾಗೃತಿ ಅಭಿಯಾನದ ಕೊರತೆ ಇದೆ ಎಂದು ಪ್ರತಿಭಟನಾ ಸಂಘಟಕರು ಹೇಳಿದ್ದಾರೆ.