ನೇಲ್ ಪಾಲಿಶ್ ಹಚ್ಚಿಕೊಳ್ಳುವುವುದು ಎಂದರೆ ಯಾವ ಹೆಣ್ಣಿಗೆ ಇಷ್ಟವಾಗಲ್ಲ? ಅದರಲ್ಲೂ ಬಣ್ಣ ಬಣ್ಣದ ನೇಲ್ ಪಾಲಿಶ್ ಹಚ್ಚಿ ಉಗುರುಗಳನ್ನು ಇನ್ನಷ್ಟು ಚಂದವಾಗಿ ಕಾಣುವಂತೆ ಮಾಡುವುದೆಂದರೆ ಎಲ್ಲಿಲ್ಲದ ಆಸಕ್ತಿ. ಹೀಗೆ ನೇಲ್ ಪಾಲಿಶ್ ಮಾಡುವಾಗ ನೇಲ್ ಪಾಲಿಶ್ ರಿಮೂವರ್ ಸ್ಫೊಟಗೊಂಡು ದುರಂತವೊಂದು ಸಂಭವಿಸಿದೆ.
ಉಗುರಿನ ಹಳೆಯ ಬಣ್ಣ ತೆಗೆಯಲು ನಾವು ಬಳಸುವ ನೇಲ್ ಪಾಲಿಶ್ ರಿಮೂವರ್ ಕೂಡ ಸ್ಫೊಟಗೊಳ್ಳಬಹುದೆಂದು ಬಹುಶಃ ಯಾರೂ ಊಹಿಸಿರಲಿಕ್ಕಿಲ್ಲ. ಆದರೆ ಇಂತದ್ದೊಂದು ದುರಂತ ಅಮೆರಿಕದಲ್ಲಿ ನಡೆದಿದ್ದು, ಯುವತಿ ಸ್ಥಿತಿ ಚಿಂತಾಜನಕವಾಗಿದೆ.
ಅಮೆರಿಕಾದ ಓಹಿಯೋದಲ್ಲಿ ಯುವತಿಯೊಬ್ಬಳು ತನ್ನ ಮನೆಯಲ್ಲಿ ರಾತ್ರಿ ಮೇಣದಬತ್ತಿ ಬೆಳಕಿನಲ್ಲಿ ಉಗುರುಗಳಿಗೆ ನೇಲ್ ಪಾಲಿಶ್ ಹಚ್ಚಲು ಮುಂದಾಗಿದ್ದಾಳೆ. ಈ ವೇಳೆ ತನ್ನ ಉಗುರುಗಳಲ್ಲಿದ್ದ ಹಳೆಯ ನೇಲ್ ಪಾಲಿಶ್ ತೆಗೆಯಲು ನೇಲ್ ಪಾಲಿಶ್ ರಿಮೂವರ್ ಬಳಸುತ್ತಿದ್ದಳು. ನೇಲ್ ಪಾಲಿಶ್ ರಿಮೂವರ್ ಬಾಟಲ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದ್ದು, ಆಕೆ ಕುಳಿತಿದ್ದ ಹಾಸಿಗೆಗೆ ಬೆಂಕಿ ಹೊತ್ತಿಕೊಂಡಿದೆ. ಅಲ್ಲದೇ ಯುವತಿಯ ಕೂದಲು, ಕೈ-ಕಾಲು, ತೊಡೆಯ ಭಾಗಗಳು ಸುಟ್ಟು ಗಾಯಗೊಂಡಿದ್ದು, ಯುವತಿ ಆಸ್ಪತ್ರೆಗೆ ದಾಖಲಾಗಿದ್ದಾಳೆ.
14 ವರ್ಷದ ಕೆನಡಿ ಗಾಯಾಳು ಯುವತಿ. ಸದ್ಯ ಯುವತಿಗೆ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇನ್ನು ಈ ಘಟನೆ ಬೆನ್ನಲ್ಲೇ ಯುವತಿ ಸಾಮಾಜಿಕ ಜಾಲತಾಣಗಳಲ್ಲಿ ತನಗಾದ ಅನುಭವ ಹಂಚಿಕೊಂಡಿದ್ದು, ಜನರಲ್ಲಿ ಜಾಗೃತಿ ಮೂಡಿಸುವುದಾಗಿ ತಿಳಿಸಿದ್ದಾಳೆ.