ಮೇಲ್ನೋಟಕ್ಕೆ ಹಿಟ್ ಅಂಡ್ ರನ್ ಘಟನೆಯೆಂದು ಕಂಡಿದ್ದ ಪ್ರಕರಣವೊಂದು 300 ಕೋಟಿ ರೂ. ಆಸ್ತಿಗಾಗಿ ನಡೆದ ಹತ್ಯೆಯೆಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
300 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿ ಮೇಲೆ ಕಣ್ಣಿಟ್ಟಿದ್ದ ಮಹಿಳೆ ತನ್ನ ಮಾವನ ಕೊಲೆಗೆ ಹಂತಕರಿಗೆ 1 ಕೋಟಿ ರೂ. ಸುಪಾರಿ ನೀಡಿದ್ದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಈ ಪ್ರಕರಣದಲ್ಲಿ ಬಲಿಯಾದ 82 ವರ್ಷದ ಪುರುಷೋತ್ತಮ್ ಪುಟ್ಟೇವಾರ್ ಗೆ ಮೇ 22 ರಂದು ನಾಗ್ಪುರದ ಬಾಲಾಜಿ ನಗರಿಯಲ್ಲಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿತ್ತು. ಈ ಪ್ರಕರಣದ ಆರಂಭದಲ್ಲಿ ಜಾಮೀನು ನೀಡಬಹುದಾದ ಅಪಘಾತದ ಪ್ರಕರಣವೆಂದು ದಾಖಲಿಸಿಕೊಂಡಿದ್ದು ಜಾಮೀನಿನ ಮೇಲೆ ಕಾರಿನೊಂದಿಗೆ ಚಾಲಕನನ್ನು ಬಿಡುಗಡೆ ಮಾಡಲಾಯಿತು. ಬಳಿಕ ಉನ್ನತ ಪೊಲೀಸ್ ಅಧಿಕಾರಿಯ ವಿವರವಾದ ತನಿಖೆಯಲ್ಲಿ ಮೃತನ ಸೊಸೆ ಅರ್ಚನಾ ಮತ್ತು ಆಕೆಯ ಸಹಚರರಾದ ಸಾರ್ಥಕ್ ಬಾಗ್ಡೆ ಮತ್ತು ಧಾರ್ಮಿಕ್ ಬಂಧಿಸಿದಾಗ ಅಸಲಿ ಸತ್ಯ ಬಯಲಾಗಿದೆ.
ಅಪಘಾತದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರವೇ ಪ್ರಕರಣವು ಹೊಸ ತಿರುವು ಪಡೆದುಕೊಂಡಿತು. ಕಾರಿನ ನೋಂದಣಿ ಸಂಖ್ಯೆಯನ್ನು ಪತ್ತೆ ಹಚ್ಚಿ ಆರೋಪಿ ಧಾರ್ಮಿಕ್ ನ ವಿಚಾರಣೆ ನಡೆಸಲಾಯಿತು.
ಪುರುಷೋತ್ತಮ್ ಮೇಲೆ ಹರಿಸಲು ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಗೆ ಸಾರ್ಥಕ್ ಬಾಗ್ಡೆ 1.20 ಲಕ್ಷ ರೂಪಾಯಿ ಖರ್ಚು ಮಾಡಿದ್ರೆ, ಕಾರ್ ಮೇಲೆ ಧಾರ್ಮಿಕ್ 40 ಸಾವಿರ ರೂಪಾಯಿ ಹಾಕಿದ್ದ. ವೃದ್ಧನ ಮೇಲೆ ಕಾರ್ ಹರಿಸಿ ಟಾಸ್ಕ್ ಮುಗಿಸಲು ಧಾರ್ಮಿಕ್, ಅರ್ಚನಾಳಿಂದ 3 ಲಕ್ಷ ರೂಪಾಯಿ ಮತ್ತು ಸ್ವಲ್ಪ ಚಿನ್ನವನ್ನು ತೆಗೆದುಕೊಂಡಿದ್ದಾಗಿ ಒಪ್ಪಿಕೊಂಡಿದ್ದ.
ಪೊಲೀಸರು ಧಾರ್ಮಿಕ್ ನಿವಾಸದಿಂದ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಅರ್ಚನಾ ಗಡ್ಚಿರೋಲಿ ಮತ್ತು ಚಂದ್ರಾಪುರದಲ್ಲಿ ನಗರ ಯೋಜನೆ ಸಹಾಯಕ ನಿರ್ದೇಶಕಿಯಾಗಿದ್ದಾರೆ.