ನಾಗ್ಪುರ ಮೂಲದ 15 ವರ್ಷದ ಬಾಲಕನೊಬ್ಬ ಕೋಡಿಂಗ್ ಸ್ಪರ್ಧೆಯಲ್ಲಿ ಗೆದ್ದ ನಂತರ ಅಮೆರಿಕಾದಲ್ಲಿ ಉದ್ಯೋಗ ಪಡೆದಿದ್ದಾನೆ. ಆದರೆ ಈತ ಇನ್ನೂ ಚಿಕ್ಕವನಾಗಿರುವುದರಿಂದ ತನಗೆ ಬಂದ ಆಫರ್ ಅನ್ನು ಕಳೆದುಕೊಂಡಿದ್ದಾನೆ.
ಹೌದು, 15 ವರ್ಷದ ವೇದಾಂತ್ ಡಿಯೋಕ್ಟೆ ಎಂಬಾತ ತಮ್ಮ ತಾಯಿಯ ಲ್ಯಾಪ್‌ಟಾಪ್‌ನಲ್ಲಿ ಇನ್ಸ್ಟಾಗ್ರಾಂ ಸ್ಕ್ರೋಲ್ ಮಾಡುವಾಗ ಈ ಸ್ಪರ್ಧೆ ಬಗ್ಗೆ ತಿಳಿದುಕೊಂಡಿದ್ದಾನೆ. ಕೂಡಲೇ ಆತ ಈ ಸ್ಪರ್ಧೆಗೆ ಪ್ರವೇಶಿಸಿದ್ದಾನೆ. ಅಲ್ಲದೆ ಎರಡು ದಿನಗಳ ಅವಧಿಯಲ್ಲಿ 2,066 ಸಾಲುಗಳ ಕೋಡ್ ಅನ್ನು ಬರೆದಿದ್ದಾನೆ.
ಫಲಿತಾಂಶ ಪ್ರಕಟವಾದಾಗ, ವೇದಾಂತ್ ಸ್ಪರ್ಧೆಯಲ್ಲಿ ಗೆದ್ದಿದ್ದಾನೆ. ಕಾರ್ಯಕ್ರಮವನ್ನು ಆಯೋಜಿಸಿದ ಅಮೆರಿಕಾ ಮೂಲದ ಕಂಪನಿಯು ಪೂರ್ಣ ಸಮಯದ ಉದ್ಯೋಗದ ಆಫರ್ ನೀಡಿದೆ. ಅಷ್ಟೇ ಅಲ್ಲ ವೇದಾಂತ್ ಗೆ ವಾರ್ಷಿಕ 33 ಲಕ್ಷ ರೂ. ಪ್ಯಾಕೇಜ್ ಕೂಡ ಘೋಷಿಸಿತ್ತು.
ಭಾಗವಹಿಸಿದ 1000 ಮಂದಿಯಲ್ಲಿ ಆಯ್ಕೆಯಾದ ವೇದಾಂತ್‌ಗೆ ನ್ಯೂಜೆರ್ಸಿಯ ಜಾಹೀರಾತು ಕಂಪನಿಯ ಹೆಚ್ ಆರ್ ಡಿ ಹುದ್ದೆಯನ್ನು ಸಹ ನೀಡಿತು. ಆದರೆ, ವೇದಾಂತ್ ವಯಸ್ಸು ಕೇವಲ 15 ವರ್ಷ ಎಂದು ತಿಳಿದಾಗ, ಕಂಪನಿಯು ಈ ಪ್ರಸ್ತಾಪವನ್ನು ತಳ್ಳಿಹಾಕಿತು.
ಅಲ್ಲದೆ ಶಿಕ್ಷಣವನ್ನು ಪೂಣಗೊಳಿಸುವಂತೆ ಕಂಪನಿ ಸಲಹೆ ನೀಡಿದೆ. ವೇದಾಂತ್ ಅನುಭವ, ವೃತ್ತಿಪರತೆ ಮತ್ತು ವಿಧಾನದಿಂದ ನಾವು ಪ್ರಭಾವಿತರಾಗಿದ್ದೇವೆ ಎಂದು ಕಂಪನಿ ತಿಳಿಸಿದೆ. ವಿದ್ಯಾಭ್ಯಾಸ ಮುಗಿದ ನಂತರ ಸಂಪರ್ಕಿಸುವಂತೆ ವೇದಾಂತ್ ಅವರನ್ನು ಕಂಪನಿ ಸೂಚಿಸಿದೆ ಎನ್ನಲಾಗಿದೆ.