
ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಛಾವಾ’ ಸಿನಿಮಾ ಬಿಡುಗಡೆಯಾದಾಗಿನಿಂದಲೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಸಿನಿಮಾ ಛತ್ರಪತಿ ಸಂಭಾಜಿ ಮಹಾರಾಜ್ ಅವರ ಜೀವನ ಮತ್ತು ಶೌರ್ಯದ ಕಥೆಯನ್ನು ಹೊಂದಿದೆ.
ಈ ಚಿತ್ರವು ಪ್ರೇಕ್ಷಕರನ್ನು ಎಷ್ಟು ಪ್ರಭಾವಿಸಿದೆ ಎಂದರೆ, ಅನೇಕರು ಕಣ್ಣೀರಿಡುತ್ತಾ ಚಿತ್ರಮಂದಿರದಿಂದ ಹೊರಬಂದಿದ್ದಾರೆ, ಇನ್ನೂ ಕೆಲವರು “ಹರ ಹರ ಮಹಾದೇವ್”, “ಜೈ ಭವಾನಿ” ಮತ್ತು “ಜೈ ಶಿವಾಜಿ” ಎಂದು ಘೋಷಣೆಗಳನ್ನು ಕೂಗಿದ್ದಾರೆ. ಆದರೆ ಒಬ್ಬ ಅಭಿಮಾನಿ ತನ್ನ ಉತ್ಸಾಹವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದು ಕುದುರೆಯ ಮೇಲೆ ಥಿಯೇಟರ್‌ಗೆ ಬಂದಿದ್ದಾನೆ.
ಅಭಿಮಾನಿಯೊಬ್ಬ ಛತ್ರಪತಿ ಸಂಭಾಜಿ ಮಹಾರಾಜ್ ಅವರ ವೇಷ ಧರಿಸಿ, ಕುದುರೆಯ ಮೇಲೆ ಕುಳಿತು ಸಿನಿಮಾ ನೋಡಲು ಬಂದಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ, ಅಭಿಮಾನಿ ಕುದುರೆಯ ಮೇಲೆ ಸವಾರಿ ಮಾಡುತ್ತಾ, ಡೋಲಿನ ಬಡಿತಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಥಿಯೇಟರ್‌ಗೆ ಪ್ರವೇಶಿಸುತ್ತಾನೆ. ಇತರ ಪ್ರೇಕ್ಷಕರು ಅವನನ್ನು ತಮ್ಮ ಫೋನ್‌ಗಳಲ್ಲಿ ಚಿತ್ರೀಕರಿಸುತ್ತಿದ್ದಾರೆ.
ಮತ್ತೊಂದು ವಿಡಿಯೋದಲ್ಲಿ, ಸಿನಿಮಾ ಮುಗಿದ ನಂತರ ಕ್ರೆಡಿಟ್ಸ್ ರೋಲ್ ಆಗುತ್ತಿರುವಾಗ ಅವನು ಕುದುರೆಯ ಮೇಲೆ ಕುಳಿತಿದ್ದಾನೆ.
ಈ ವಿಡಿಯೋಗಳಿಗೆ ಪ್ರತಿಕ್ರಿಯಿಸಿದ ನೆಟ್ಟಿಗರು, “ಇವನಿಗೆ ವಿಶೇಷ ‘ರಾಜಮರ್ಯಾದೆ ಪ್ರವೇಶ’ ಟಿಕೆಟ್ ಇತ್ತೇ? ಅಥವಾ ‘ಛತ್ರಪತಿ ಪಾಸ್’ ಬಳಸಿ ಒಳಗೆ ಬಂದನಾ ?” ಎಂದು ಪ್ರಶ್ನಿಸಿದ್ದಾರೆ.
“ಒಳಗೆ ಕುದುರೆ ತರಲು ಅವಕಾಶವಿದೆ, ಆದರೆ ಊಟಕ್ಕೆ ಮಾತ್ರ ನಿರ್ಬಂಧ ಹೇರಿದ್ದಾರೆ?” ಎಂದು ಇನ್ನೊಬ್ಬರು ವ್ಯಂಗ್ಯವಾಡಿದ್ದಾರೆ.
“ಹೆಚ್ಚಿನ ಗಮನ ಸೆಳೆಯಲು ಥಿಯೇಟರ್‌ನವರು ಇದನ್ನು ಉದ್ದೇಶಪೂರ್ವಕವಾಗಿ ಮಾಡಿದ್ದಾರೆ” ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಈ ಚಿತ್ರವನ್ನು ಲಕ್ಷ್ಮಣ್ ಉಟೆಕರ್ ನಿರ್ದೇಶಿಸಿದ್ದಾರೆ ಮತ್ತು ವಿಕ್ಕಿ ಕೌಶಲ್, ಅಕ್ಷಯ್ ಖನ್ನಾ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ.
Chhaava Movie: ‘छावा’ पाहायला घोड्यावरून संभाजीराजांची वेषभूषा धारण करत आला तरुण…थेट चित्रपट गृहात एन्ट्री, व्हिडिओ पाहा #Chhaava #ChhaavaInCinemas #ChhaavaReview pic.twitter.com/Lihl3RBLXo
— sandip kapde (@SandipKapde) February 14, 2025
How did they manage to bring a horse inside lmaooo 😂 pic.twitter.com/5rs3ExEKgB
— ban youtube (@doug_1399) February 17, 2025