ಮಹಾರಾಷ್ಟ್ರದ ನಾಗ್ಪುರ ನಗರದ ಹೋಟೆಲ್ ಕೊಠಡಿಯಲ್ಲಿ ಶನಿವಾರ ಸಂಜೆ 30 ವರ್ಷದ ವ್ಯಕ್ತಿಯೊಬ್ಬ ತಮ್ಮ ಲಿವ್-ಇನ್ ಪಾರ್ಟ್ನರ್ ಮತ್ತು ಅವರ ಮೂರು ವರ್ಷದ ಮಗನನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಚಿನ್ ವಿನೋದಕುಮಾರ್ ರಾವುತ್, ನಜ್ನಿನ್(29) ಮತ್ತು ಅವರ ಮಗ ಯುಗ್ ಅವರ ಮೃತದೇಹಗಳು ಎಂಐಡಿಸಿ ಪ್ರದೇಶದ ಗಜಾನನ ಕಾಲೋನಿ ಬಳಿಯ ಗೋಲ್ಡನ್ ಕೀ ಹೋಟೆಲ್‌ನಲ್ಲಿನ ಕೊಠಡಿಯಲ್ಲಿ ಪತ್ತೆಯಾಗಿದ್ದು, ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ರಾವುತ್ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದರೆ, ಅವರ ಲಿವ್-ಇನ್ ಪಾರ್ಟ್ನರ್ ನಾಜ್ನಿನ್ ತಲೆಗೆ ಗಾಯ ರಕ್ತದ ಕಲೆಗಳೊಂದಿಗೆ ಹತ್ತಿರದಲ್ಲಿ ಬಿದ್ದಿರುವುದು ಕಂಡುಬಂದಿದೆ. ಯುಗ್ ಅವರ ದೇಹದಲ್ಲಿ ಯಾವುದೇ ಗಾಯಗಳು ಕಂಡುಬಂದಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ರಾವುತ್ ಮೊದಲು ಸುತ್ತಿಗೆಯಿಂದ ನಾಜ್ನಿನ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಒಂದೋ ವಿಷವುಣಿಸಿ ಅಥವಾ ಕತ್ತು ಹಿಸುಕಿ ಹುಡುಗನನ್ನು ಸಾಯಿಸಿ ನಂತರ ಆತ ನೇಣು ಬಿಗಿದುಕೊಂಡಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ವೃತ್ತಿಯಲ್ಲಿ ಟ್ರಕ್ ಡ್ರೈವರ್ ಆಗಿರುವ ರಾವುತ್ ಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಈತ ಮಧ್ಯಪ್ರದೇಶ ಮೂಲದ ನಾಜ್ನಿನ್ ಎಂಬಾಕೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ. ರಾವುತ್ ತನ್ನ ಹೆಂಡತಿಗೆ ವಿಚ್ಛೇದನ ನೀಡಲಿಲ್ಲ ಮತ್ತು ನಾಜ್ನಿನ್ ಜೊತೆ ವಾಸಿಸಲು ಪ್ರಾರಂಭಿಸಿದನು.
ನಂತರ ನಾಜ್ನಿನ್ ನಿಂದ ದೂರವಾಗಲು ಪ್ರಾರಂಭಿಸಿದ. ಇದರಿಂದ ಅವರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಅಂತಿಮವಾಗಿ, ಅವರು ಪ್ರತ್ಯೇಕವಾಗಿ ಉಳಿಯಲು ನಿರ್ಧರಿಸಿದರು. ಶುಕ್ರವಾರ ಇಬ್ಬರೂ 500 ರೂಪಾಯಿಯ ಸ್ಟಾಂಪ್ ಪೇಪರ್‌ನಲ್ಲಿ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು. ತನಿಖೆಗಾಗಿ ಪೊಲೀಸರು ಸ್ಟಾಂಪ್ ಪೇಪರ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ರಾವುತ್, ನಾಜ್ನಿನ್ ಮತ್ತು ಹುಡುಗ ಮಧ್ಯಾಹ್ನ ಹೋಟೆಲ್‌ನಲ್ಲಿ ಚೆಕ್ ಇನ್ ಮಾಡಿದ್ದಾರೆ. ಮೃತ ರಾವುತ್ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.