ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಠಾಣೆಯನ್ನು ಸಂಪೂರ್ಣವಾಗಿ ಅಲಂಕರಿಸಿ ಮೈಕ್ ಸೆಟ್ ಹಾಕಿ ಬಾಲಿವುಡ್ ಹಾಡೊಂದಕ್ಕೆ ಕುಣಿದು ಕುಪ್ಪಳಿಸಿದ್ದ ಇಬ್ಬರು ಪುರುಷ ಹಾಗೂ ಇಬ್ಬರು ಮಹಿಳಾ ಪೊಲೀಸರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಹಿರಿಯ ಅಧಿಕಾರಿಗಳು ನಾಲ್ವರು ಪೊಲೀಸರನ್ನು ಅಮಾನತು ಮಾಡಿದ್ದಾರೆ.
ಈ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದ್ದು ಅಲ್ಲಿನ ಗಾಂಧಿಭಾಗ್ ಪೊಲೀಸ್ ಠಾಣೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಠಾಣೆ ಮುಂಭಾಗ ತ್ರಿವರ್ಣ ಧ್ವಜದ ಬಲೂನ್ ಗಳನ್ನು ಹಾಕಲಾಗಿದ್ದು, ಆಕರ್ಷಕವಾಗಿ ಕಾಣುವಂತೆ ಮಾಡಲಾಗಿತ್ತು. ಇಷ್ಟೇ ಆಗಿದ್ದರೆ ಪರವಾಗಿಲ್ಲ ಆದರೆ ಮೈಕ್ ಸೆಟ್ ಕೂಡ ಹಾಕಿಸಲಾಗಿದ್ದು, ನಾಲ್ವರು ಪೊಲೀಸರಿಗೆ ನೃತ್ಯ ಮಾಡದೆ ಸುಮ್ಮನೆ ಕುಳಿತುಕೊಳ್ಳಲು ಆಗಿಲ್ಲ.
ಹೀಗಾಗಿ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅಭಿನಯದ ಹಾಡು ‘ಹೋ ಕೈಕೇ ಪಾನುಬರಸ ವಾಲಾ’ ಹಾಡು ಪ್ಲೇ ಆಗುತ್ತಿದ್ದಂತೆ ಗಾಂಧಿಬಾಗ್ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಸಂಜಯ್ ಪಟ್ನಾಕರ್, ಮುಖ್ಯಪೇದೆಗಳಾದ ಅಬ್ದುಲ್ ಖಯ್ಯೂಮ್ ಘನಿ ಹಾಗೂ ಭಾಗ್ಯಶ್ರೀ ಗಿರಿ ಮತ್ತು ಮಹಿಳಾ ಪೇದೆ ನಿರ್ಮಲ ಗಾವ್ಳಿ ಭರ್ಜರಿ ಸ್ಟೆಪ್ ಹಾಕಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಗರಂ ಆದ ಹಿರಿಯ ಅಧಿಕಾರಿಗಳು, ಶಿಸ್ತಿಗೆ ಹೆಸರಾದ ಪೊಲೀಸ್ ಇಲಾಖೆಯಲ್ಲಿ ಅಶಿಸ್ತು ವರ್ತನೆ ತೋರಿದ ಆರೋಪದ ಮೇರೆಗೆ ನಾಲ್ವರನ್ನೂ ಮೂರು ತಿಂಗಳ ಕಾಲ ಸಸ್ಪೆಂಡ್ ಮಾಡಿದ್ದಾರೆ.