ಹುಬ್ಬಳ್ಳಿ: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ನಡೆದ ಗಲಭೆ ಪ್ರಕರಣ ರಾಜಕೀಯ ನಾಯಕರ ವಾಕ್ಸಮರಕ್ಕೆ, ಆರೋಪ-ಪ್ರತ್ಯಾರೋಪಕ್ಕೆ ವೇದಿಕೆಯಾಗಿದೆ. ನಾಗಮಂಗಲ ಗಲಭೆ ಪ್ರಕರಣಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ಕರ್ನಾಟಕದ ಕಾಂಗ್ರೆಸ್ ಸರ್ಕಾರದ ತುಷ್ಠೀಕರಣ ನೀತಿಯಿಂದ ಗಲಭೆ ಸಂಭವಿಸಿದೆ. ನಾಗಮಂಗಲದಲ್ಲಿ ದೊಡ್ದ ಪ್ರಮಾಣದಲ್ಲಿ ಗಲಾಟೆ ನಡೆಯಲು ಸರ್ಕಾರವೇ ಕಾರಣ. ಗಣೇಶ ಮೂರ್ತಿ ಇದ್ದರೂ ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ವೋಟ್ ಬ್ಯಾಂಕ್ ನೀತಿ ಅನುಸರಿಸದೇ ಮತಾಂಧ ಶಕ್ತಿಯನ್ನು ಹತ್ತಿಕ್ಕಬೇಕು. ಹಿಂದೂ ವಿರೋಧಿ ನೀತಿಯಿಂದ ಈ ರೀತಿ ಘಟನೆಗಳು ಆಗುತ್ತಿದೆ. ಇದಕ್ಕೆಲ್ಲ ರಾಜ್ಯ ಸರ್ಕಾರವೇ ಹೊಣೆ ಎಂದು ಕಿಡಿಕಾರಿದರು.