
ಬೆಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ನಡೆದಿದ್ದ ಗಲಭೆ ಪ್ರಕರಣದ ಆರೋಪಿಯೊಬ್ಬ ಬ್ರೇನ್ ಸ್ಟ್ರೋಕ್ ನಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
23 ವರ್ಷದ ಯುವಕ ಕಿರಣ್ ಮೃತ ಆರೋಪಿ. ಈತ ನಾಗಾಮಂಗಲ ಗಲಭೆ ಪ್ರಕರಣದ A17ನೇ ಆರೋಪಿಯಾಗಿದ್ದಾನೆ. ಗಲಭೆ ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಕಿರಣ್ ಗೆ ನಿನ್ನೆ ರಾತ್ರಿ ಬ್ರೇನ್ ಸ್ಟ್ರೋಕ್ ಆಗಿತ್ತು. ಆತನನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಿರಣ್ ಸಾವನ್ನಪ್ಪಿದ್ದಾನೆ.
ನಾಗಮಂಗಲ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರಣ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಈಗಾಗಲೇ ಕಿರಣ್ ತಂದೆ ಪ್ರಕರಣದಲ್ಲಿ ಮಂಡ್ಯ ಜೈಲು ಸೇರಿದ್ದಾರೆ. ಬಂಧನ ಭೀತಿಯಲ್ಲಿದ್ದ ಆರೋಪಿ ಕಿರಣ್ ಸೆ.11ರಂದು ಊರು ತೊರೆದಿದ್ದ. ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ. ಸಿಕ್ಕಿಹಾಕಿಕೊಳ್ಳುತ್ತೇನೆ ಎಂಬ ಆತಂಕದಿಲ್ಲೇ ದಿನಕಳೆಯುತ್ತಿದ್ದ ಕಿರಣ್ ಗೆ ತಡರಾತ್ರಿ ಇದ್ದಕ್ಕಿದ್ದಂತೆ ಬ್ರೇನ್ ಸ್ಟ್ರೋಕ್ ಆಗಿತ್ತು. ಇದೀಗ ಚಿಕಿತ್ಸೆ ಫಲಿಸದೇ ಕಿರಣ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.