ನಾಗಾಲ್ಯಾಂಡ್‌ನ ಅತ್ಯಂತ ಹಿರಿಯ ನಿವಾಸಿ, ಪುಪಿರೇಯ್ ಫುಕಾ ತಮ್ಮ 121ನೇ ವಯಸ್ಸಿನಲ್ಲಿ ಬುಧವಾರದಂದು ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಕೋಹಿಮಾ ಜಿಲ್ಲೆಯ ಕಿಗ್ವೆಮಾ ಎಂಬ ಗ್ರಾಮದ ನಿವಾಸಿಯಾಗಿದ್ದಾರೆ ಫುಕಾ.
ವಿಚಾಪಾ ಫುಕಾರೊಂದಿಗೆ ವಿವಾಹವಾಗಿದ್ದ ಪುಪಿರೇಯ್‌ಗೆ ನಾಲ್ವರು ಮಕ್ಕಳು – ಮೂರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾರೆ. ನಾಗಾಲ್ಯಾಂಡ್‌ನ ಮೊಟ್ಟ ಮೊದಲ ಮೆಟ್ರಿಕ್ಯುಲೇಟ್, ಪದವೀಧರ, ಹಾಗೂ ಗೆಜ಼ೆಟೆಡ್ ಅಧಿಕಾರಿಯಾಗಿದ್ದ ಅವರ ಮೊದಲ ಪುತ್ರ 1989ರಲ್ಲಿ ನಿಧನರಾಗಿದ್ದಾರೆ.
ಪುಪಿರೇಯ್‌ರ ಪತಿ 1969ರಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ನಾಲ್ಕೂ ಮಕ್ಕಳು ಅದಾಗಲೇ ಮೃತಪಟ್ಟಿದ್ದಾರೆ – ಮೂವರು 1980ರ ದಶಕದಲ್ಲಿ ಮತ್ತು 1990ರ ದಶಕದಲ್ಲಿ, ಮತ್ತೊಬ್ಬರು ಆಗಸ್ಟ್ 15, 2020ರಂದು, ತಮ್ಮ 82ನೇ ವಯಸ್ಸಿನಲ್ಲಿ. ಪುಪಿರೇಯ್‌ಗೆ 18 ಮೊಮ್ಮಕ್ಕಳಿದ್ದು, 56 ಮರಿಮಕ್ಕಳು ಹಾಗೂ 12 ಮರಿ ಮೊಮ್ಮಕ್ಕಳಿದ್ದಾರೆ.
ತಮ್ಮ 80ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡ ಪುಪಿರೇಯ್, ಕೆಲ ವರ್ಷಗಳ ಹಿಂದೆ ಆಲಿಸುವ ಕ್ಷಮತೆಯನ್ನೂ ಕಳೆದುಕೊಂಡಿದ್ದು, ಜೋರಾಗಿ ಕೂಗಿದಾಗ ಮಾತ್ರವೇ ಪ್ರತಿಕ್ರಿಯಿಸುತ್ತಿದ್ದರು.
1982ರಲ್ಲಿ ಚುನಾವಣಾ ಆಯೋಗ ವಿತರಿಸಿದ್ದ ಮತದಾರರ ಗುರುತಿನ ಚೀಟಿಯಿಂದ ಪುಪಿರೇಯ್‌ರ ವಯಸ್ಸನ್ನು ಅಂದಾಜಿಸಲಾಗಿದೆ.