ವಿಶ್ವ ಅಪ್ಪಂದಿರ ದಿನಾಚರಣೆಯಂದು ಫೇಸ್ಬುಕ್/ವಾಟ್ಸಾಪ್‌ಗಳಲ್ಲಿ ಸಾಕಷ್ಟು ಪೋಸ್ಟ್‌ಗಳು ಹಾಗೂ ಸಂದೇಶಗಳ ವಿನಿಮಿಯ ಆಗುವುದು ಸಹಜ. ತಂದೆಯಂದಿರು ಮಕ್ಕಳ ಜೀವನ ಕಟ್ಟಿಕೊಡಲು ಮಾಡುವ ತ್ಯಾಗಗಳಿಗೆ ಧನ್ಯವಾದ ಸಲ್ಲಿಸಲು ಈ ದಿನವನ್ನು ಅರ್ಪಿಸಲಾಗಿದೆ.
ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್, ತಮ್ಮ ರಾಜ್ಯದಲ್ಲಿ ತಂದೆಯಂದಿರು ಮಕ್ಕಳಿಗೆ ಏನೆಲ್ಲಾ ಮಾಡುತ್ತಾರೆ ಎಂದು ತೋರುವ ವಿಡಿಯೋವೊಂದನ್ನು ಶೇರ್ ಮಾಡಿಕೊಂಡು ಭಾವಪೂರ್ಣ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದಾರೆ.
“ತಂದೆಯಂದಿರನ್ನು ಅವರು ನೀಡುವ ಮಾರ್ಗದರ್ಶನ, ಕಲಿಸುವ ಬುದ್ಧಿ, ಹಾಗೂ ಕೊಡುವ ಬೆಂಬಲಕ್ಕಾಗಿ ನಾಗಾಲ್ಯಾಂಡ್‌ನಲ್ಲಿ ಅವರನ್ನು ಗೌರವಿಸಲಾಗುತ್ತದೆ. ತಂತಮ್ಮ ಕುಟುಂಬಗಳಿಗೆ ಅವರು ಪಡುವ ಪರಿಶ್ರಮಕ್ಕಾಗಿ ಅಪ್ಪಂದಿರನ್ನು ನೆನೆಯಲಾಗುತ್ತದೆ. ಎಷ್ಟೋ ಬಾರಿ ತಂತಮ್ಮ ಕುಟುಂಬಗಳಿಗೆ ಅನ್ನ ಸಂಪಾದಿಸುವ ಏಕೈಕ ಶಕ್ತಿಗಳಾಗಿರುವ ಅಪ್ಪಂದಿರು ತಮ್ಮ ಮಕ್ಕಳನ್ನು ಸಲಹಲು ದಣಿವರಿಯದೇ ಶ್ರಮಿಸುತ್ತಾರೆ,” ಎಂದು ಅಲಾಂಗ್ ಈ ಸಂದೇಶದಲ್ಲಿ ಹೇಳಿಕೊಂಡಿದ್ದಾರೆ.