ಬೆಂಗಳೂರು: ಮೈಸೂರು ಅನಂತಸ್ವಾಮಿ ಧಾಟಿಯಲ್ಲಿ 2.30 ನಿಮಿಷ ಅವಧಿಯ ‘ನಾಡಗೀತೆ’ ಹಾಡುವಂತೆ ಸರ್ಕಾರ ನಿರ್ದಿಷ್ಟ ಧಾಟಿ ಮತ್ತು ಕಾಲಾವಧಿ ನಿಗದಿಪಡಿಸಿ ಆದೇಶ ಹೊರಡಿಸಿದೆ.
ಸಂಗೀತ ಸಂಯೋಜಕ ಮೈಸೂರು ಅನಂತಸ್ವಾಮಿಯವರ ಧಾಟಿಯಲ್ಲಿ ಪೂರ್ಣ ಗೀತೆಯನ್ನು ಯಾವುದೇ ಆಲಾಪ ಹಾಗೂ ಪುನರಾವರ್ತನೆ ಇಲ್ಲದಂತೆ ಎರಡು ನಿಮಿಷ 30 ಸೆಕೆಂಡ್ ನಲ್ಲಿ ಹಾಡಬೇಕು ಎಂದು ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.
ಕೆಲವು ಕಾರ್ಯಕ್ರಮಗಳಲ್ಲಿ 7 -8 ನಿಮಿಷ ನಾಡಗೀತೆ ಹಾಡುತ್ತಿದ್ದು, ಇದರಿಂದ ಅಶಕ್ತರು ಮತ್ತು ವಿಕಲಚೇತನರಿಗೆ ಅನಾನುಕೂಲವಾಗಿತ್ತು. ಹೀಗಾಗಿ, ಧಾಟಿ ಹಾಗೂ ಕಾಲಮಿತಿಯ ಬಗ್ಗೆ ಸ್ಪಷ್ಟತೆ ತರಬೇಕೆಂಬ ಒತ್ತಾಯ ಕೇಳಿ ಬಂದಿತ್ತು.
ಸಾಹಿತಿಗಳು ಮತ್ತು ಸುಗಮ ಸಂಗೀತ ಕ್ಷೇತ್ರದ ಕಲಾವಿದರನ್ನು ಒಳಗೊಂಡಂತೆ ಖ್ಯಾತ ಗಾಯಕಿ ವಿದುಷಿ ಹೆಚ್.ಆರ್. ಲೀಲಾವತಿ ಅಧ್ಯಕ್ಷತೆಯ ಸಮಿತಿ ರಚಿಸಿದ್ದು, ಸಮಿತಿ ನೀಡಿದ ವರದಿ ಆಧರಿಸಿ ಸರ್ಕಾರ ಕ್ರಮ ಕೈಗೊಂಡಿದೆ.
ಕುವೆಂಪು ವಿರಚಿತ ‘ಜಯ ಭಾರತ ಜನನಿಯ ತನುಜಾತೆ’ ಗೀತೆಯನ್ನು ಪೂರ್ಣವಾಗಿ ಹಾಡಬೇಕು. ಯಾವುದೇ ಆಲಾಪವಿಲ್ಲದೆ ಪುನರಾವರ್ತನೆ ಇಲ್ಲದೆ ಎರಡು ನಿಮಿಷ 30 ಸೆಕೆಂಡುಗಳಲ್ಲಿ ಹಾಡಬೇಕು ಎಂದು ಆದೇಶಿಸಲಾಗಿದೆ.