
ಬೆಂಗಳೂರು: ರೈತರಿಗೆ ಸಾಲ ನೀಡುವ ಸಹಕಾರಿ ಸಂಘಗಳಿಗೆ ರಿಯಾಯಿತಿ ಬಡ್ಡಿ ದರದಲ್ಲಿ ನೀಡುವ ಸಾಲದ ಮೊತ್ತವನ್ನು ನಬಾರ್ಡ್ ಕಡಿತಗೊಳಿಸಿದ್ದು, ರಾಜ್ಯದಲ್ಲಿ ಕೃಷಿ ಸಾಲ ವಿತರಣೆಗೆ ಹಣದ ಕೊರತೆ ಉಂಟಾಗಿದೆ.
ರಿಯಾಯಿತಿ ಬಡ್ಡಿ ದರದ ಸಾಲದ ಮೊತ್ತವನ್ನು ನಬಾರ್ಡ್ ಇಳಿಕೆ ಮಾಡಿದ್ದರಿಂದ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸಂಕಷ್ಟ ಎದುರಾಗಿದೆ. ನಬಾರ್ಡ್ ರಿಯಾಯಿತಿ ಬಡ್ಡಿ ದರದಲ್ಲಿ ನೀಡುವ ಸಾಲದ ಮೊತ್ತ ಕಡಿತಗೊಳಿಸಿದ್ದರಿಂದ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಜ್ಯ ಸರ್ಕಾರದಿಂದ ಎಲ್ಲಾ 31 ಜಿಲ್ಲೆ ಒಳಗೊಂಡಂತೆ 21 ಡಿಸಿಸಿ ಬ್ಯಾಂಕುಗಳ ಮೂಲಕ 2024 -25 ನೇ ಸಾಲಿಗೆ 35.10 ಲಕ್ಷ ರೈತರಿಗೆ 25000 ಕೋಟಿ ರೂ. ಅಲ್ಪಾವಧಿ ಕೃಷಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ. ರೈತರಿಗೆ ಕೃಷಿ ಸಾಲ ಸಮರ್ಪಕ ವಿತರಣೆ ಉದ್ದೇಶದಿಂದ ಒಟ್ಟು ಸಾಲದಲ್ಲಿ ಶೇಕಡ 60ರಷ್ಟು ಸುಮಾರು 13,742 ಕೋಟಿ ಅಲ್ಪಾವಧಿ ಕೃಷಿ ಸಾಲ ಮಂಜೂರು ಮಾಡುವಂತೆ ನಬಾರ್ಡ್ ಗೆ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಪ್ರಸ್ತಾವನೆ ಸಲ್ಲಿಸಿತ್ತು.
ಆದರೆ, 4580 ಕೋಟಿ ರೂಪಾಯಿಯನ್ನು ಶೇಕಡ 8ರ ಹೆಚ್ಚುವರಿ ಬಡ್ಡಿ ದರದಲ್ಲಿ ನಬಾರ್ಡ್ ಮಂಜೂರು ಮಾಡಿದೆ. ರಿಯಾಯಿತಿ ಬಡ್ಡಿ ದರದಲ್ಲಿ ಕೃಷಿ ಸಾಲ ಮಿತಿಯನ್ನು ನಬಾರ್ಡ್ ಕಡಿಮೆ ಮಾಡಿದೆ. ಇದರಿಂದ ತೀವ್ರ ಹಣಕಾಸಿನ ತೊಂದರೆ ಎದುರಾಗಿದ್ದು, ಕೃಷಿ ಸಾಲ ವಿತರಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.