ನವದೆಹಲಿ: ಸಹಕಾರ ಸಂಘಗಳ ಮೂಲಕ ರೈತರಿಗೆ ಸಮರ್ಪಕವಾಗಿ ಅಲ್ಪಾವಧಿ ಬೆಳೆ ಸಾಲ ವಿತರಿಸಲು ಸಾಧ್ಯವಾಗವಂತೆ ನಬಾರ್ಡ್ ಸಾಲದ ಮಿತಿಯನ್ನು ಹೆಚ್ಚಳ ಮಾಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ ರಾಜ್ಯಕ್ಕೆ ಪುನರ್ಧನ ಸಾಲದ ಮಿತಿ ಹೆಚ್ಚಳ ಮಾಡುವಂತೆ ನಬಾರ್ಡ್ ಮತ್ತು ಆರ್.ಬಿ.ಐ.ಗೆ ನಿರ್ದೇಶನ ನೀಡಲು ಮನವಿ ಮಾಡಿದ್ದಾರೆ.
ನಬಾರ್ಡ್ ಕೃಷಿ ಸಾಲದ ವಿಚಾರದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು. 2024- 25 ನೇ ಹಣಕಾಸು ವರ್ಷದ ಸಾಲದ ಮಿತಿ ಹೆಚ್ಚಳ ಮಾಡಬೇಕೆಂದು ಮನವಿ ಮಾಡಿದ್ದಾರೆ.
ನಬಾರ್ಡ್ ಕಳೆದ ಹಣಕಾಸು ವರ್ಷದಲ್ಲಿ 5600 ಕೋಟಿ ರೂಪಾಯಿ ನೀಡಿತ್ತು. ಈ ವರ್ಷಕ್ಕೆ 9162 ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದು, 2340 ಕೋಟಿ ರೂ. ಮಾತ್ರ ಸಾಲ ಘೋಷಿಸಲಾಗಿದೆ. ಕಳೆದ ಬಾರಿಗಿಂತ ಶೇಕಡ 58 ರಷ್ಟು ಕಡಿಮೆ ಇದೆ. ಇದರಿಂದ ರೈತರಿಗೆ ನಿಗದಿಯಂತೆ ಸಾಲ ವಿತರಿಸಲು ಸಾಧ್ಯವಾಗುತ್ತಿಲ್ಲ. ರೈತರು ದುಬಾರಿ ಬಡ್ಡಿಗೆ ಸಾಲ ಮಾಡಬೇಕಿದೆ. ಹೀಗಾಗಿ ನಬಾರ್ಡ್ ಸಾಲದ ಮಿತಿ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿದ್ದಾರೆ.