ರಾಯಚೂರು: ಅರಣ್ಯ ಭೂಮಿ ಒತ್ತುವರಿ ಮಾಡಿರುವ ಆರೋಪದಲ್ಲಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ, ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಚಿವ ಬೋಸರಾಜು, ನಾನು ಯಾವುದೇ ಅರಣ್ಯ ಭೂಮಿ ಒತ್ತುವರಿ ಮಾಡಿಲ್ಲ ಎಂದು ತಿಳಿಸಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಸಚಿವ ಬೋಸರಾಜು, ನನ್ನ ಪತ್ನಿ ಹೆಸರಲ್ಲಿ ನಾನು ರಾಯಚೂರಿನಲ್ಲಿ 5 ಎಕರೆ ಮೀಸಲು ರಕ್ಷಿತ ಅರಣ್ಯ ಪ್ರದೇಶ ಒತ್ತುವರಿ ಮಾಡಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಇದು ಸುಳ್ಳು ಆರೋಪ ಎಂದರು.
ನನ್ನ ಪತ್ನಿ ವಿರುದ್ಧದ ಆರೋಪ ಸುಳ್ಳು. 1987ರಲ್ಲಿ ಪಟ್ಟಾದಾರರಿಂದ ನಾವು ಕೃಷಿ ಭೂಮಿ ಖರೀದಿ ಮಾಡಿದ್ದೇವೆ ಎಂದು ಹೇಳಿದ್ದಾರೆ. 2022ರಲ್ಲಿ ಅರಣ್ಯ ಇಲಾಖೆಯವರು ನಮಗೆ ನೋಟಿಸ್ ಕೊಟ್ಟಿದ್ದರು. ನೋಟಿಸ್ ವಿರುದ್ಧ ಕಲಬುರಗಿ ಹೈಕೋರ್ಟ್ ನಲ್ಲಿ ಚಾಲೇಂಜ್ ಮಾಡಿದ್ದೆವು. ಕೋರ್ಟ್ ನಲ್ಲಿ ಕೇಸ್ ರದ್ದುಗೊಂಡಿದೆ. ಹಾಗಾಗಿ ಸಮಸ್ಯೆ ಬಗೆಹರಿದಿದೆ ಎಂದು ತಿಳಿಸಿದರು.
ನಮಗೆ ಮಾತ್ರವಲ್ಲ 1700 ಎಕರೆ ಪ್ರದೇಶದ ಸರ್ವೆ ನಂಬರ್ ಗಳಿಗೆ ನೋಟಿಸ್ ಕೊಟ್ಟಿದ್ದರು. ಆ ಎಲ್ಲಾ ಸರ್ವೆ ನಂಬರ್ ನವರೂ ಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನು 1987ರಲ್ಲಿ ಭೂಮಿ ಖರೀದಿ ವೇಳೆಯಾಗಲಿ ಅಥವಾ ಭೂಪರಿವರ್ತನೆ ವೇಳೆ ಆಗಲಿ ನಾನು ಯಾವುದೇ ಅಧಿಕಾರದಲ್ಲಿ ಇರಲಿಲ್ಲ. ನಾನು ಮೊದಲ ಬಾರಿ ಶಾಸಕನಾಗಿದ್ದೇ 1999ರಲ್ಲಿ. ಮಂತ್ರಿಯಾಗಿದ್ದು ಒಂದುವರೆ ವರ್ಷದ ಹಿಂದೆ. ಹಾಗಾಗಿ ಮಂತ್ರಿಯಾಗಿ ನಾನು ಪ್ರಭವ ಬೀರಿದ್ದೇನೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು ಎಂದರು.