ಬೆಂಗಳೂರು: ಕೃಷಿ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು, ಕೃಷಿ ವಿವಿ ಕುಲಪತಿಗಳೊಂದಿಗೆ ಸಭೆ ನಡೆಸಿದ ಸಚಿವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೃಷಿ ಇಲಾಖೆಯಲ್ಲಿ ಶೇಕಡ 57.8ರಷ್ಟು ಹುದ್ದೆಗಳು ಖಾಲಿ ಇವೆ. 8982 ಮಂಜೂರಾದ ಹುದ್ದೆಗಳ ಪೈಕಿ 5195 ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದ್ದಾರೆ.
ಹುದ್ದೆಗಳು ಖಾಲಿ ಇರುವುದರಿಂದ ಕೃಷಿ ಇಲಾಖೆಯ ಕಾರ್ಯಕ್ರಮಗಳನ್ನು ರೈತರಿಗೆ ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಹೀಗಾಗಿ ಹಂತ ಹಂತವಾಗಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕಳೆದ ಸರ್ಕಾರದ ಅವಧಿಯಲ್ಲಿ 368 ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗಳ ಭರ್ತಿಗೆ ಕೆ.ಪಿ.ಎಸ್.ಸಿ.ಗೆ ಪ್ರಸ್ತಾವನೆ ಸಲ್ಲಿಸಿದ್ದು, ಇವನ್ನು ಹೊರತುಪಡಿಸಿ ಇತರೆ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 82.35 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಇಲ್ಲ. ಕೃಷಿ ಚಟುವಟಿಕೆಗೆ ಯಾವುದೇ ಸಮಸ್ಯೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ ಅವರು, ಕಳಪೆ ಬಿತ್ತನೆ ಬೀಜ ಮಾರಾಟಗಾರರ ಮೇಲೆ ನಿಗಾವಹಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.