
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ ಎರಡು ಗಂಟೆಯೊಳಗೆ ಆರೋಪಿ ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಯುವಕನನ್ನು ವಶಕ್ಕೆ ಪಡೆದ ಬಳಿಕ ವಿದ್ಯಾರ್ಥಿನಿ ತನ್ನ ಹೇಳಿಕೆ ಬದಲಿಸಿದ್ದಾಳೆ. ಅತ್ಯಾಚಾರಕ್ಕೆ ಯತ್ನ ಆರೋಪ ಮಾಡಿದ್ದ ಯುವತಿಯ ಮೇಲೆ ಅನುಮಾನದ ಹುತ್ತ ಮೂಡಿದೆ ಎನ್ನಲಾಗಿದೆ.
ಅಪರಿಚಿತ ವ್ಯಕ್ತಿ ಅತ್ಯಾಚಾರಕ್ಕೆ ಯತ್ನಿಸಿದ್ದ ಎಂದು ಆಕೆ ಆರೋಪಿಸಿದ್ದಳು. ಯುವಕನನ್ನು ಬಂಧಿಸಿದ ನಂತರ ಉಲ್ಟಾ ಹೊಡೆದಿದ್ದಾಳೆ. ಆತನ ಪರಿಚಯವಿದೆ ಎಂದು ಯುವತಿ ಹೇಳಿಕೊಂಡಿದ್ದಾಳೆ. ಯುವಕನೊಂದಿಗೆ ಆಕೆ ನಿರಂತರ ಸಂಪರ್ಕದಲ್ಲಿದ್ದಳು. ಘಟನೆಗೂ ಮೊದಲು ಇಬ್ಬರೂ ಪರಸ್ಪರ ಸಂಪರ್ಕದಲ್ಲಿದ್ದರು. ದೂರು ನೀಡಿದ ಬಳಿಕವೂ ಯುವಕನಿಗೆ ಯುವತಿ ಮೆಸೇಜ್ ಮಾಡಿದ್ದಾಳೆ. ಯುವಕ ಎನ್.ಆರ್. ಠಾಣೆ ಪೊಲೀಸರ ವಶದಲ್ಲಿದ್ದಾನೆ. ಘಟನೆ ನಡೆದ ಎರಡು ಗಂಟೆಯಲ್ಲಿ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆನ್ನಲಾಗಿದೆ.
ವಿದ್ಯಾರ್ಥಿನಿ ಒಬ್ಬಳೇ ಇದ್ದಾಗ ಹಲ್ಲೆ ನಡೆಸಿ ಅತ್ಯಾಚಾರಕ್ಕೆ ಯತ್ನ ನಡೆಸಿದ ಆರೋಪ ಕೇಳಿಬಂದಿತ್ತು. ಅತ್ಯಾಚಾರಕ್ಕೆ ಯತ್ನಿಸಿ ಹಲ್ಲೆ ಮಾಡಿ ಯುವಕ ಪರಾರಿಯಾಗಿದ್ದ. ಸ್ಟಡಿ ಹೌಸ್ ನಲ್ಲಿ ಆಂಧ್ರಪ್ರದೇಶದ 7 ಮಂದಿ ವಿದ್ಯಾರ್ಥಿನಿಯರಿದ್ದು, ಘಟನೆ ನಡೆದ ಸಂದರ್ಭದಲ್ಲಿ ಉಳಿದ ವಿದ್ಯಾರ್ಥಿನಿಯರು ತರಗತಿಗೆ ತೆರಳಿದ್ದರು. ಇದನ್ನು ಗಮನಿಸಿ ಸ್ಟಡಿ ಹೌಸ್ ಒಳಗೆ ನುಗ್ಗಿದ ಕಾಮುಕ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಹಲ್ಲೆ ಮಾಡಿ ಪರಾರಿಯಾಗಿದ್ದ. ಗಾಯಾಳು ವಿದ್ಯಾರ್ಥಿನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಪೊಲೀಸ್ ಅಧಿಕಾರಿಗಳು ಕೂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಯುವಕನನ್ನು ವಶಕ್ಕೆ ಪಡೆಯುತ್ತಿದ್ದಂತೆ ಯುವತಿ ಹೇಳಿಕೆ ಬದಲಿಸಿದ್ದಾಳೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.