ಮೈಸೂರಿನ ಕೆಆರ್ ಆಸ್ಪತ್ರೆಯ ವಿಶೇಷ ಚೇತನರ ವಾರ್ಡ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ವಿಶೇಷಚೇತನ ಮಹಿಳೆಯ ಮೇಲೆ ವಿಕೃತಕಾಮಿ ಅತ್ಯಾಚಾರ ಎಸಗಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಕೆಆರ್ ಆಸ್ಪತ್ರೆಯಲ್ಲಿ 37 ವರ್ಷದ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಸರಿಯಾಗಿ ಮಾತನಾಡಲು ಬರುವುದಿಲ್ಲ. ಕಳೆದ ಶನಿವಾರ ರಾತ್ರಿ ಕಿಟಕಿ ಗ್ರಿಲ್ ಮುರಿದು ಒಳನುಗ್ಗಿದ ವಿಕೃತಕಾಮಿ ಅತ್ಯಾಚಾರ ಎಸಗಿದ್ದಾನೆ. ವಾರ್ಡ್ನಲ್ಲಿ ವೃದ್ಧೆಯೊಬ್ಬರು ಆಸ್ಪತ್ರೆಯ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಿದ್ದರೂ ಕ್ರಮ ಕೈಗೊಂಡಿಲ್ಲವೆಂದು ದೂರಲಾಗಿದೆ.
ಮಾನವ ಹಕ್ಕುಗಳ ಸೇವಾ ಸಮಿತಿಯವರ ಬಳಿ ವೃದ್ದೆ ಈ ಬಗ್ಗೆ ಮಾಹಿತಿ ನೀಡಿದ ನಂತರ ಪೊಲೀಸರಿಗೆ ವಿಷಯ ತಿಳಿಸಲಾಗಿದೆ. ದೇವರಾಜ ಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕೂಡ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ ಎನ್ನಲಾಗಿದೆ.