
ಮೈಸೂರು: ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಗ್ರಾಮವೊಂದರ ಮಹಿಳೆ ಅಪ್ರಾಪ್ತನೊಂದಿಗೆ ದೈಹಿಕ ಸಂಬಂಧ ಬೆಳೆಸಿ ಆತನನ್ನು ಮದುವೆಯಾಗಲು ಹಠ ಹಿಡಿದ ಘಟನೆ ನಡೆದಿದ್ದು, ಬಾಲಕನ ಪೋಷಕರು ನಂಜನಗೂಡು ಗ್ರಾಮಾಂತರ ಪೊಲೀಸರ ಮೊರೆ ಹೋಗಿದ್ದಾರೆ.
ಗಂಡನಿಂದ ದೂರವಾಗಿರುವ 35 ವರ್ಷದ ಮಹಿಳೆಗೆ ಮೂವರು ಮಕ್ಕಳಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಇಬ್ಬರ ನಡುವೆ ಪರಿಚಯವಾಗಿದೆ. ಬಾಲಕನೊಂದಿಗೆ ಡೇಟಿಂಗ್ ನಲ್ಲಿದ್ದ ಆಂಟಿ ಆತನನ್ನು ಕರೆದುಕೊಂಡು ಮೂರು ದಿನ ಪ್ರವಾಸಕ್ಕೆ ಹೋಗಿ ಬಂದಿದ್ದು, ಆತನೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದಾಳೆನ್ನಲಾಗಿದೆ.
ಪ್ರವಾಸ ಮುಗಿಸಿ ಮನೆಗೆ ಬಂದಿದ್ದ ಬಾಲಕ ಮೊಬೈಲ್ ಕಳೆದು ಹೋಗಿದ್ದರಿಂದ ಕಾಲ್ ಮಾಡಲು ಆಗಿರಲಿಲ್ಲ ಎಂದು ಸುಳ್ಳು ಹೇಳಿದ್ದಾನೆ. ಇದಾದ ನಂತರದಲ್ಲಿ ಮಹಿಳೆ ಬಾಲಕನ ಮನೆಗೆ ಬಂದು ನಿಮ್ಮ ಮಗನನ್ನು ಪ್ರೀತಿಸುತ್ತಿದ್ದು, ಆತನೊಂದಿಗೆ ಮದುವೆ ಮಾಡಿಸಿ ಎಂದು ಕೇಳಿಕೊಂಡಿದ್ದಾಳೆ.
ಆಶ್ಚರ್ಯಗೊಂಡ ಬಾಲಕನ ಪೋಷಕರು ಇದಕ್ಕೆ ಒಪ್ಪಿಲ್ಲ. ಗ್ರಾಮದ ಹಿರಿಯರು ಪಂಚಾಯಿತಿ ನಡೆಸಿದರೂ, ಮಹಿಳೆ ಒಪ್ಪದಿದ್ದಾಗ ಬಾಲಕನ ಪೋಷಕರು ಪೊಲೀಸರ ಮೊರೆ ಹೋಗಿದ್ದಾರೆ ಎಂದು ಹೇಳಲಾಗಿದೆ.