ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ ಬಳಿಕ ಇದೀಗ ಪೊಲೀಸರು ಆರೋಪಿಗಳ ಮೇಲೆ ಸುಳ್ಳು ಶೋಧಕ ತಂತ್ರಜ್ಞಾನ ಬಳಕೆ ಮಾಡಲು ಮುಂದಾಗಿದ್ದಾರೆ.
ಪೊಲೀಸ್ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ, ಪೊಲೀಸರು ಬ್ರೇನ್ ಮ್ಯಾಪಿಂಗ್ ತಂತ್ರಜ್ಞಾನ, ಲೇಯರ್ಡ್ ವಾಯ್ಸ್ ಅನಾಲಿಸಿಸ್ ತಂತ್ರಜ್ಞಾನವನ್ನು ಆರೋಪಿಗಳ ಮೇಲೆ ಪ್ರಯೋಗ ಮಾಡಲಿದ್ದಾರೆ.
ಸಂತ್ರಸ್ತೆಯು ಪ್ರಕರಣ ಸಂಬಂಧ ಯಾವುದೇ ಹೇಳಿಕೆ ನೀಡಲು ಅಥವಾ ಆರೋಪಿಗಳನ್ನು ಪತ್ತೆ ಮಾಡಲು ಮುಂದೆ ಬರದ ಕಾರಣ ಪೊಲೀಸರು ತಂತ್ರಜ್ಞಾನದ ಮೊರೆ ಹೋಗಲು ನಿರ್ಧರಿಸಿದ್ದಾರೆ.
ಸುಳ್ಳು ಶೋಧಕ ಪರೀಕ್ಷೆ ಅಥವಾ ಪಾಲಿಗ್ರಾಫ್ ಪರೀಕ್ಷೆಯನ್ನು ವಿಶೇಷ ಸಾಧನವೊಂದನ್ನು ಬಳಸಿ ಮಾಡಲಾಗುತ್ತದೆ. ಈ ಸಾಧನವು ಆರೋಪಿಯು ಹೇಳಿಕೆ ನೀಡುವಾಗ ಆತನ ಉಸಿರಾಟ, ನಾಡಿಮಿಡಿತ, ರಕ್ತದೊತ್ತಡ ಹೀಗೆ ಹಲವಾರು ವಿಷಯಗಳನ್ನು ಅಳೆಯುತ್ತದೆ. ಆರೋಪಿಯ ನಡವಳಿಕೆಯನ್ನು ನಿರ್ಧರಿಸಲು ಬ್ರೇನ್ ಮ್ಯಾಪಿಂಗ್ ಪರೀಕ್ಷೆ ಮಾಡಲಾಗುತ್ತದೆ.
ಲೇಯರ್ಡ್ ವಾಯ್ಸ್ ಅನಾಲಿಸಿಸ್ ಒಂದು ವಿಶಿಷ್ಟವಾದ ಗಣಿತದ ಪ್ರಕ್ರಿಯೆಯನ್ನು ಹೊಂದಿದೆ. ಇದು ಕೂಡ ಆರೋಪಿಯು ಮಾತನಾಡುವಾಗ ಆಗುವ ಏರಿಳಿತಗಳನ್ನು ದಾಖಲಿಸುತ್ತದೆ. ಈ ಏರಿಳಿತಗಳನ್ನು ಒತ್ತಡ, ಉತ್ಸಾಹ ಹೀಗೆ ಹಲವು ವಿಧಗಳಲ್ಲಿ ವಿಂಗಡಿಸಲಾಗುತ್ತದೆ.