ಮೈಸೂರು: ಮೈಸೂರಿನ ಪ್ರಖ್ಯಾತ ಪ್ರಸೂತಿ ತಜ್ಞರಾದ ಡಾ. ಜಿ.ಎಸ್. ವಿದ್ಯಾಧರೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಅವರ ಪೋಷಕರು ಪತಿ ವಿರುದ್ಧ ಕಿರುಕುಳ, ಕೊಲೆ ಆರೋಪ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಆರ್‌ಟಿಓ ವೃತ್ತದ ಸಮೀಪ ಇರುವ ಡೆನ್ಮಾರ್ ಅಪಾರ್ಟ್ಮೆಂಟ್ ನಲ್ಲಿ ವೈದ್ಯೆ ವಿದ್ಯಾಧರೆ ಅವರ ಶವ ಪತ್ತೆಯಾಗಿದೆ. ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದರು.
ವಿದ್ಯಾಧರೆ ಅವರ ಪತಿ ವಿರುದ್ಧ ಕಿರುಕುಳ ಮತ್ತು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ವಿದ್ಯಾಧರೆ ಅವರ ಪೋಷಕರು ಪತಿ ಡಾ. ಷಣ್ಮುಖ ವಿರುದ್ಧ ದೂರು ನೀಡಿದ್ದಾರೆ. ಷಣ್ಮುಖ ಕೂಡ ಕೆಆರ್ ಆಸ್ಪತ್ರೆಯ ಪ್ರಖ್ಯಾತ ಮೂಳೆ ತಜ್ಞರಾಗಿದ್ದಾರೆ.
ಮಂಡ್ಯದ ಗೌಡಗೆರೆಯ ಡಾ. ವಿದ್ಯಾಧರೆ ಅವರನ್ನು ಡಾ. ಷಣ್ಮುಖ 14 ವರ್ಷದ ಹಿಂದೆ ವಿವಾಹವಾಗಿದ್ದರು. ನಿನ್ನೆ ತವರು ಮನೆಯಿಂದ ಮೈಸೂರಿನ ಮನೆಗೆ ವಿದ್ಯಾಧರೆ ಆಗಮಿಸಿದ್ದರು. ಅಪಾರ್ಟ್ಮೆಂಟ್ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹಲವು ವರ್ಷಗಳಿಂದ ಡಾ. ಷಣ್ಮುಖ ಮತ್ತು ವಿದ್ಯಾಧರೆ ನಡುವೆ ವಿರಸ ಇತ್ತು. ಒಂದೇ ಅಪಾರ್ಟ್ಮೆಂಟ್ ನಲ್ಲಿ ಬೇರೆ ಬೇರೆ ಮನೆಗಳಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರು.
ತಮ್ಮ ಮಗಳನ್ನು ಕೊಲೆ ಮಾಡಲಾಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಪತಿ ಷಣ್ಮುಖ ವಿರುದ್ಧ ವಿದ್ಯಾಧರೆಯ ತಮ್ಮ, ತಾಯಿ, ಸಂಬಂಧಿಕರು ಕೊಲೆ ಆರೋಪ ಮಾಡಿದ್ದು, ಮೈಸೂರಿನ ಲಕ್ಷ್ಮಿಪುರ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದಾರೆ.