ಮೈಸೂರು: 2022 ರ ದಸರಾ ಮಹೋತ್ಸವದಲ್ಲಿ ಗೋಲ್ಡ್ ಪಾಸ್ ಇರುವುದಿಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು ಗಣ್ಯರು, ವಿದೇಶಿಗರಿಗೆ ಹೆಚ್ಚಾಗಿ ಅವಲಂಬಿತವಾಗಿದ್ದ ಗೋಲ್ಡ್ ಪಾಸ್ ರದ್ದು ಮಾಡಲಾಗಿದೆ. ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಈ ಬಾರಿ ಗೋಲ್ಡ್ ಪಾಸ್ ರದ್ದು ಮಾಡಲಾಗಿದೆ. ವಿವಿಐಪಿ, ಕರ್ತವ್ಯ ನಿರತ ಸಿಬ್ಬಂದಿ ಪಾಸ್ ಹೊರತುಪಡಿಸಿ ಎಲ್ಲಾ ಪಾಸ್ ಗಳನ್ನು ಕೂಡ ರದ್ದು ಮಾಡಲಾಗಿದೆ. ಗೋಲ್ ಮಾಲ್ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಅಕ್ರಮಗಳಿಗೆ ಈ ಬಾರಿ ದಸರಾ ಮಹೋತ್ಸವದಲ್ಲಿ ಅವಕಾಶ ನೀಡುವುದಿಲ್ಲ ಎಂದರು.
ಜಂಬೂಸವಾರಿಗೆ ಆನೆಗಳ ಪಟ್ಟಿ ಅಂತಿಮಗೊಂಡಿದ್ದು, ಅಭಿಮನ್ಯು ನೇತೃತ್ವದ ಗಜಪಡೆ ಮೈಸೂರಿಗೆ ಆಗಮಿಸಲಿದೆ. ಮತ್ತಿಗೋಡು ಆನೆ ಶಿಬಿರದಿಂದ ಗೋಪಾಲಸ್ವಾಮಿ, ಅಭಿಮನ್ಯು, ಭೀಮ, ಮಹೇಂದ್ರ, ಬಳ್ಳೇ ಆನೆ ಶಿಬಿರದಿಂದ ಅರ್ಜುನ, ದುಬಾರೆ ಆನೆ ಶಿಬಿರದಿಂದ ವಿಕ್ರಮ, ಧನಂಜಯ, ಕಾವೇರಿ, ಗೋಪಿ, ಶ್ರೀರಾಮ, ವಿಜಯಾ, ರಾಮಪುರ ಆನೆ ಶಿಬಿರದಿಂದ ಚೈತ್ರಾ, ಲಕ್ಷ್ಮಿ, ಪಾರ್ಥಸಾರಥಿ ಆನೆಗಳು ಆಗಮಿಸಲಿವೆ ಎಂದು ಮಾಹಿತಿ ನೀಡಿದರು.