ಮೈಸೂರು: ಕೊರೋನಾ ಕಾರಣದಿಂದ ಎರಡು ವರ್ಷದಿಂದ ಕಳೆಗುಂದಿದ್ದ ಮೈಸೂರು ದಸರಾ ಈ ಬಾರಿ ವಿಜೃಂಭಣೆಯಿಂದ ನಡೆಯುತ್ತಿದೆ. ಅಪಾರ ಪ್ರವಾಸಿಗರು, ಜನ ಮೈಸೂರು ದಸರಾ ವೈಭವ ಕಣ್ತುಂಬಿಕೊಳ್ಳಲು ಆಗಮಿಸಿದ್ದಾರೆ.
ಚಾಮುಂಡಿ ಬೆಟ್ಟದಿಂದ ಉತ್ಸವಮೂರ್ತಿ ಅರಮನೆಯತ್ತ ಹೊರಟಿದೆ. ಪೂಜೆಯ ನಂತರ ತೆರೆದ ಅಲಂಕೃತ ವಾಹನದಲ್ಲಿ ಮೆರವಣಿಗೆ ಮೂಲಕ ಉತ್ಸವ ಮೂರ್ತಿಯನ್ನು ಅರಮನೆಗೆ ತರಲಾಗಿದೆ. ಮಧ್ಯಾಹ್ನದ ನಂತರ ಅಂಬಾರಿಯಲ್ಲಿ ಉತ್ಸವ ಮೂರ್ತಿ ಸಾಗಲಿದೆ. ಅಭಿಮನ್ಯು ಆನೆ ಅಂಬಾರಿ ಹೊರಲಿದೆ.
ನಾಗಲಿಂಗಪ್ಪ ಬಡಿಗೇರ ಅವರಿಂದ ದಸರಾ ಜಂಬೂ ಸವಾರಿ ಆನೆಗಳನ್ನು ಅಲಂಕಾರ ಮಾಡಲಾಗುತ್ತಿದ್ದು, ಕಲಾವಿದರು ದಸರಾ ಆನೆಗಳನ್ನು ಅಲಂಕರಿಸುತ್ತಿದ್ದಾರೆ. 16 ವರ್ಷಗಳಿಂದ ನಾಗಲಿಂಗಪ್ಪ ಆನೆಗಳಿಗೆ ಅಲಂಕಾರ ಮಾಡುತ್ತಿದ್ದಾರೆ.
ಎರಡು ವರ್ಷಗಳ ಬಳಿಕ ದಸರಾ ಜಂಬೂ ಸವಾರಿಣಿಯಲ್ಲಿ ಸ್ತಬ್ಧ ಚಿತ್ರಗಳ ಮೆರವಣಿಗೆ ಸಾಗಲಿದೆ. ಈ ಬಾರಿಯ ವಿಶೇಷವಾಗಿ ಪುನೀತ್ ರಾಜಕುಮಾರ್ ಸ್ತಬ್ಧ ಚಿತ್ರ ಗಮನ ಸೆಳೆದಿದೆ. 31 ಜಿಲ್ಲೆಗಳ ಕಲೆ, ಸಾಹಿತ್ಯ, ಇತಿಹಾಸವಿರುವ ಸ್ತಬ್ಧ ಚಿತ್ರಗಳನ್ನು ಸಿದ್ಧಪಡಿಸಲಾಗಿದೆ. ಪುನೀತ್ ರಾಜಕುಮಾರ್ ಸ್ತಬ್ಧ ಚಿತ್ರದ ಪ್ರದರ್ಶನವೂ ಇರಲಿದೆ.
ಇಂದು ಮಧ್ಯಾಹ್ನ ಅರಮನೆ ಮುಂಭಾಗದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನಂದಿ ದ್ವಜಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ವಿಶ್ವವಿಖ್ಯಾತ ದಸರಾ ಜಂಬೂಸವಾರಿ ಮೆರವಣಿಗೆ ಆರಂಭವಾಗಲಿದೆ.