ಬೆಂಗಳೂರು: ಮೈಸೂರು ಜಿಲ್ಲೆಯ ಅಭಿವೃದ್ಧಿ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವರು, ಸ್ಥಳೀಯ ಶಾಸಕರು ಹಾಗೂ ಸಂಸದರೊಂದಿಗಿನ ಸಭೆ ನಡೆಸಲಾಗಿದ್ದು, ಸಭೆಯ ಮುಖ್ಯಾಂಶಗಳು ಇಂತಿವೆ.
ವಿಮಾನ ನಿಲ್ದಾಣ ವಿಸ್ತರಣೆ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಪೂರ್ಣಗೊಳಿಸಲಿದೆ. ಯೋಜನೆಯಡಿ ಇನ್ನೂ 46 ಎಕರೆ ಭೂಸ್ವಾಧೀನ ಆಗಬೇಕಿದೆ. ಈಗಾಗಲೇ 111 ಎಕರೆ ಭೂಸ್ವಾಧೀನಕ್ಕೆ ಪಾವತಿ ಮಾಡಲಾಗಿದೆ. ಇನ್ನೂ 95 ಎಕರೆ ಪಾವತಿ ಆಗಬೇಕಿದೆ.
ಶಿಥಿಲಗೊಂಡಿರುವ ಲಾನ್ಸ್‌ಡೌನ್ ಕಟ್ಟಡವನ್ನು ತೆರವುಗೊಳಿಸಿ ಅದೇ ಮಾದರಿಯಲ್ಲಿ ಕಟ್ಟಡ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಈ ಕುರಿತಾದ ಎಲ್ಲಾ ಕಾನೂನು ತೊಡಕುಗಳನ್ನು ಬಗೆಹರಿಸಬೇಕು.
ಶಿಥಿಲಾವಸ್ಥೆಯಲ್ಲಿರುವ ದೇವರಾಜ ಅರಸು ಮಾರುಕಟ್ಟೆಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು.
ದಳವಾಯಿ ಕೆರೆಗೆ ಕೊಳಚೆ ನೀರು ಸೇರುವುದನ್ನು ತಡೆಗಟ್ಟಿ ಅಭಿವೃದ್ಧಿಪಡಿಸಲು ₹25 ಕೋಟಿ ಮೊತ್ತದ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಇದೇ ರೀತಿ ಕುಕ್ಕರಳ್ಳಿ ಕೆರೆ ಪುನಶ್ಚತನಕ್ಕೆ ಕ್ರಮವಹಿಸಬೇಕು. ಇದಕ್ಕಾಗಿ ಕೆರೆ ಅಭಿವೃದ್ಧಿ ಶುಲ್ಕ ಬಳಸಿಕೊಳ್ಳಬೇಕು.
ಮೈಸೂರು ನಗರ ಹಾಗೂ ಹೊಸದಾಗಿ ನಿರ್ಮಿಸಲಾಗಿರುವ ಬಡಾವಣೆಗಳಲ್ಲಿ ಒಳಚರಂಡಿ ನಿರ್ಮಾಣ, ಕೊಳಚೆ ನೀರು ಸಂಸ್ಕರಣೆ ಯೋಜನೆ ಜಾರಿಗೆ 670 ಕೋಟಿ ರೂ. ಡಿಪಿಆರ್ ಸಿದ್ಧಪಡಿಸಲಾಗಿದ್ದು, ಅದನ್ನು ಸ೦ಪುಟದ ಮು೦ದೆ ಮ೦ಡಿಸಲು ಕ್ರಮ ಕೈಗೊಳ್ಳಬೇಕು.
ಅಂಬೇಡ್ಕರ್ ಭವನ ಕಾಮಗಾರಿಯನ್ನು 23.83 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸುವ ಯೋಜನೆಯನ್ನು ಮುಂದಿನ ಸಚಿವ ಸಂಪುಟದಲ್ಲಿ ಮಂಡಿಸಲು ಕ್ರಮ ಕೈಗೊಳ್ಳಬೇಕು.
ಸಾಲಿಗ್ರಾಮ ತಾಲೂಕಿನಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ತಾಲೂಕು ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಇದೇ ರೀತಿ ಪಿರಿಯಾಪಟ್ಟಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಬೇಕು.
ಮೈಸೂರು ನಗರದಲ್ಲಿ 46 ಕಿ.ಮೀ. ವ್ಯಾಪ್ತಿಯಲ್ಲಿ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಅನುಮತಿ ನೀಡಲಾಗಿದೆ.
ಐಟಿ ಪಾರ್ಕ್ ಸ್ಥಾಪನೆಗೆ ಕೋಚನಹಳ್ಳಿಯಲ್ಲಿ ಜಮೀನು ನೀಡುವ ಕುರಿತು ಕ್ರಮ ಕೈಗೊಳ್ಳಬೇಕು. ಕೋಚನಹಳ್ಳಿಯಲ್ಲಿ ಕೆಐಎಡಿಬಿಗೆ 404 ಎಕರೆ ಜಮೀನು ಸ್ವಾಧೀನ ಕುರಿತಾಗಿ ಈಗಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.
ಫಿಲ್ಮ ಸಿಟಿ ನಿರ್ಮಾಣ ಕಾರ್ಯವನ್ನು ಆದಷ್ಟು ಬೇಗನೆ ಆರಂಭಿಸಲು ಕ್ರಮ ಕೈಗೊಳ್ಳಬೇಕು.
ಹಳೆಯ ಜಿಲ್ಲಾಧಿಕಾರಿ ಕಚೇರಿಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಲು 13 ಕೋಟಿ ರೂ. ಯೋಜನೆ ಸಿದ್ಧಪಡಿಸಲಾಗಿದೆ.