ಮಂಡ್ಯ: ಮೈಶುಗರ್ ಕಾರ್ಖಾನೆ ಮಾಜಿ ಅಧ್ಯಕ್ಷ ನಾಗರಾಜಪ್ಪ ಅವರ ವಿರುದ್ಧ ನೂರಾರು ಕೋಟಿ ಭ್ರಷ್ಟಾಚಾರ ಆರೋಪ ಸಾಬೀತಾಗಿದ್ದು, ರಾಜ್ಯ ಸರ್ಕಾರ ಕ್ರಿಮಿನಲ್ ಕೇಸ್ ದಾಖಲಿಸಿ ತನಿಖೆಗೆ ಮುಂದಾಗಿದೆ.
ಮೈಶುಗರ್ ಕಾರ್ಖಾನೆ ರಾಜ್ಯ ಸರ್ಕಾರಿ ಸ್ವಾಮ್ಯದ ಏಕೈಕ ಕಾರ್ಖಾನೆಯಾಗಿದೆ. ಆದರೆ ಮಾಜಿ ಅಧ್ಯಕ್ಷರೇ ಭಾರಿ ಭ್ರಷ್ಟಾಚಾರ ನಡೆಸಿರುವುದು ಬಯಲಾಗಿದೆ. ಈ ಹಿನ್ನೆಲೆಲ್ಲಿ ಮಾಜಿ ಅಧ್ಯಕ್ಷ ನಾಗರಾಜಪ್ಪ ಅವರಿಂದಲೇ ನಷ್ಟದ ಹಣ ವಸೂಲಿ ಮಾಡಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆಗೆ ಮುಂದಾಗಿದೆ.
ಬಿ.ಎಸ್.ಯಡಿಯೂರಪ್ಪ 2008ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಾಗರಾಜಪ್ಪ ಮೈಶುಗರ್ ಕಾರ್ಖಾನೆ ಅಧ್ಯಕ್ಷರಾಗಿದ್ದರು. ನಾಗರಾಜಪ್ಪ ಯಡಿಯೂರಪ್ಪನವರ ಸಂಬಂಧಿಯೂ ಆಗಿದ್ದಾರೆ. ನಾಗರಾಜಪ್ಪ ತಮ್ಮ ಅವಧಿಯಲ್ಲಿ ಹೊಸ ಮಿಲ್ ಖರೀದಿ, ಡಿಸ್ಟಿಲರಿ ಮಾರಾಟ, ಮೈ ರಮ್, ಮೈ ವಿಸ್ಕಿ, ಸಕ್ಕರೆ ಮಾರಾಟ ಹೀಗೆ ಹಲವು ರೀತಿಯಲ್ಲಿ ಅಕ್ರಮವೆಸಗಿರುವುದು ಬಯಲಾಗಿದೆ.
ನಾಗರಾಜಪ್ಪ ಮೈಶುಗರ್ ಅಧ್ಯಕ್ಷರಾಗಿದ್ದ ವೇಳೆ ಕಾರ್ಖಾನೆಗೆ 121 ಕೋಟಿ ನಷ್ಟವಾಗಿದೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣವನ್ನು ಡಿ.ವಿ.ಸದಾನಂದಗೌಡ ಸರ್ಕಾರ ಲೋಕಾಯುಕ್ತ ತನಿಖೆಗೆ ವಹಿಸಿತ್ತು. ಲೋಕಾಯುಕ್ತ ತನಿಖೆಯಲ್ಲಿ ಭ್ರಷ್ಟಾಚಾರ ನಡೆದಿರುವುದು ಸಾಬೀತಾಗಿತ್ತು. ಮೈಶುಗರ್ ನಷ್ಟದ ಹಣವನ್ನು ನಾಗರಾಜಪ್ಪ ಅವರಿಂದಲೇ ವಸೂಲಿ ಮಾಡಿ, ಪ್ರಕರಣ ದಾಖಲಿಸುವಂತೆ ಲೋಕಾಯುಕ್ತ ಕೋರ್ಟ್ ಆದೇಶ ನೀಡಿದ್ದರೂ ಈ ಹಿಂದಿನ ಸರ್ಕಾರ ಹಿಂದೇಟು ಹಾಕಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಈ ಕ್ರಮ ಕೈಗೊಳ್ಳಲು ಮುಂದಾಗಿದೆ.