ಮೈಸೂರು: ಮೈಸೂರು ದಸರಾ ಉತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದ್ದು, ಅಕ್ಟೋಬರ್ 15ರಂದು ಭಾನುವಾರ ನಾಡಹಬ್ಬ ದಸರಾಗೆ ಚಾಲನೆ ದೊರೆಯಲಿದೆ. ಈ ಬಾರಿ ದಸರಾಗೆ ತೆರಳುವ ಮಹಿಳೆಯರಿಗೆ ರಾಜ್ಯ ಸರ್ಕಾರ ಜಾರಿ ಮಾಡಿರುವ ಶಕ್ತಿ ಯೋಜನೆಯಿಂದಾಗಿ ಅನುಕೂಲವಾಗಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಜನರು ದಸರಾ ವೀಕ್ಷಣೆಗೆ ತೆರಳಲಿದ್ದಾರೆ.
ಈ ನಡುವೆ ಮೈಸೂರು ದಸರಾಗೆ ಬರುವವರಿಗಾಗಿಯೇ ಮೈಸೂರಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(KSRTC) ಹೆಚ್ಚುವರಿ ಬಸ್ ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದೆ. ಈ ಮೂಲಕ ದಸರಾಗೆ ಬರುವವರಿಗಾಗಿ ಇನ್ನಷ್ಟು ಅನುಕೂಲ ಮಾಡಿಕೊಡಲು ಕೆ.ಎಸ್.ಆರ್.ಟಿ.ಸಿ ಮುಂದಾಗಿದೆ.
ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಇರುವುದರಿಂದ ಸಹಜವಾಗಿಯೇ ಬಸ್ ಗಳಲ್ಲಿ ಜನದಟ್ಟಣೆ ಹೆಚ್ಚಾಗಲಿದೆ. ಸಧ್ಯ ಕಾರ್ಯನಿರ್ವಹಿಸುತ್ತಿರುವ 1000ಕ್ಕೂ ಹೆಚ್ಚಿನ ಬಸ್ ಗಳ ಜೊತೆಗೆ ಜನದಟ್ಟಣೆಯನ್ನು ನಿಯಂತ್ರಿಸಲು ಹೆಚ್ಚುವರಿ 350 ಬಸ್ ಗಳನ್ನು ಓಡಿಸಲಾಗುತ್ತದೆ. ಬೇಡಿಕೆ ಹೆಚ್ಚಾದರೆ ಬೇರೆ ಬೇರೆ ಜಿಲ್ಲಾ ಬಸ್ ಡಿಪೋಗಳಿಂದಲು ಬಸ್ ತರಿಸಲಾಗುವುದು.
ದಸರಾ ಸಂದರ್ಭದಲ್ಲಿ ಜನದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಸಂಸ್ಥೆ ಸಂಪೂರ್ಣ ಸಜ್ಜಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಶ್ರೀನಿವಾಸ್ ತಿಳಿಸಿದ್ದಾರೆ.