
ಮೈಸೂರು: ರಾಜಧಾನಿ ಬೆಂಗಳೂರು, ಮೈಸೂರಿನಲ್ಲಿ ಚಿರತೆ, ಹುಲಿ ಹಾವಳಿ ಹೆಚ್ಚಾಗಿದ್ದು, ಮೈಸೂರಿನಲ್ಲಿ ರೈತನೋರ್ವ ಹುಲಿ ದಾಳಿಗೆ ಬಲಿಯಾಗಿದ್ದಾರೆ.
ಬಿ.ಮಟಕೆರೆ-ಹೊಸಕೋಟೆ ರಸ್ತೆಯಲ್ಲಿ ದನ ಮೇಯಿಸುತ್ತಿದ್ದ ರೈತನ ಮೇಲೆ ಹುಲಿ ದಾಳಿ ನಡೆಸಿದ್ದು, ರೈತ ಬಾಲಾಜಿ ನಾಯಕ್ (42) ಸಾವನ್ನಪ್ಪಿದ್ದಾರೆ.
ಮೊದಲಿಗೆ ಹುಲಿ ದನಗಳ ಮೇಲೆ ದಾಳಿ ಮಾಡಿದೆ. ಈ ವೇಳೆ ದನಗಳು ಹುಲಿಯಿಂದ ತಪ್ಪಿಸಿಕೊಂಡು ದಿಕ್ಕಾಪಾಲಾಗಿ ಓಡಿವೆ. ಈ ವೇಳೆ ಸ್ಥಳದಲ್ಲಿ ಸಿಕ್ಕ ರೈತ ಬಾಲಾಜಿ ಮೇಲೆ ಹುಲಿ ದಾಳಿ ನಡೆಸಿ ಅವರನ್ನು ಕಾಡಿಗೆ ಎಳೆದೊಯ್ದು ತಿಂದಿದೆ. ಈ ಘಟನೆಯನ್ನು ಕಣ್ಣಾರೆ ಕಂಡ ರಸ್ತೆ ಪಕ್ಕದ ಜಮೀನಿನಲ್ಲಿದ್ದ ಜನರು ಕೂಗಿಕೊಂಡಿದ್ದಾರೆ.
ಕಾಡಿನಲ್ಲಿ ರೈತನನ್ನು ಹುಡುಕುವಷ್ಟರಲ್ಲಿ ಹುಲಿ ರೈತನ ದೇಹದ ಕೆಲ ಭಾಗ, ಒಂದು ಕಾಲನ್ನು ತಿಂದು ಹಾಕಿದೆ. ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು ಹುಲಿ ಸೆರೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ.