ಮೈಸೂರು: ಮೈಸೂರಿನ ಪ್ರತಿಷ್ಠಿತ ಆಸ್ಪತ್ರೆ ಎಂದೇ ಹೆಸರಾಗಿದ್ದ ಆದಿತ್ಯ ಅಧಿಕಾರಿ ಆಸ್ಪತ್ರೆ ಬಂದ್ ಮಾಡಿಸಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.
ಆಸ್ಪತ್ರೆಗೆ ಬೀಗ ಹಾಕಿ ವೈದ್ಯ ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದಾರೆ. ಅಲ್ಲದೇ ಆಸ್ಪತ್ರೆಯಲ್ಲಿರುವ ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ.
ಇಷ್ಟಕ್ಕೂ ಏಕಾಏಕಿ ಆದಿತ್ಯ ಅಧಿಕಾರಿ ಆಸ್ಪತ್ರೆ ಬಂದ್ ಮಾಡಿಸಲು ಕಾರಣವೇನು? ಇಲ್ಲಿದೆ ಮಾಹಿತಿ. 2016ರಲ್ಲಿ ರವಿಗೌಡ ದೊಡ್ದಪ್ಪ ಶಿವಣ್ಣ ಎಂಬುವವರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ 2017ರಲ್ಲಿ ಅವರನ್ನು ಆದಿತ್ಯ ಅಧಿಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ಆಪರೇಷನ್ ಗಾಗಿ ಬರೋಬ್ಬರಿ 4 ತಿಂಗಳು ಚಿಕಿತ್ಸೆ ನೀಡಲಾಗಿತ್ತು. ಆಪರೇಷನ್ ಏನೋ ಮುಗಿದಿತ್ತು. ಆದರೆ ರೋಗಿ ಶಿವಣ್ಣ ಮೃತಪಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ದೂರು ದಾಖಲಾಗಿತ್ತು. ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಡಾ.ಚಂದ್ರಶೇಖರ್ ವಿರುದ್ಧ ತನಿಖೆ ನಡೆಸಲು ಆದೇಶ ನೀಡಿತ್ತು. ತನಿಖೆ ವೇಳೆ ಡಾ.ಚಂದ್ರಶೇಖರ್ ಅವರ ಐದು ತಪ್ಪುಗಳು ಬೆಳಕಿಗೆ ಬಂದಿದ್ದವು. ಡಾ.ಚಂದ್ರಶೇಖರ್ ಅನಸ್ತೇಷಿಯ ವೈದ್ಯರಲ್ಲ, ಅವಿದ್ಯಾವಂತ ನರ್ಸಿಂಗ್ ಸ್ಟಾಫ್ ನೇಮಕ, ಅನಸ್ತೇಷಿಯ ವಿಷಯದಲ್ಲಿ ವಿದ್ಯಾರ್ಹತೆಯನ್ನೇ ಹೊಂದಿಲ್ಲ, ಅನಧಿಕೃತ ಬಿಎಎಂಎಸ್ ವ್ಯಾಸಂಗ ಮಾಡಿದವರ ನೇಮಕ- ಇವು ರವಿಗೌಡ ದೊಡ್ಡಪ್ಪ ಶಿವಣ್ಣ ಸಾವಿಗೆ ಕಾರಣವಾಗಿರಬಹುದು ಎಂಬುದು ತನಿಖೆಯಿಂದ ತಿಳಿದುಬಂದಿತ್ತು.
ಈ ಹಿನ್ನೆಲೆಯಲ್ಲಿ ಮೃತರ ಕುಟುಂಬಕ್ಕೆ 15 ಲಕ್ಷದ 60 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಆ.8, 2023ರಲ್ಲಿ ಆಯೋಗ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ವೈದ್ಯ ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆಸ್ಪತ್ರೆಗೆ ಬೀಗ ಹಾಕಲಾಗಿದೆ.