ಮೈಸೂರು: ಮನೆಯಲ್ಲಿ ವಿವಿಧ ರೀತಿಯ ಬೆಕ್ಕು, ನಾಯಿಗಳನ್ನು ಸಾಕುವುದನ್ನು ನೋಡಿದ್ದೇವೆ,ಕೇಳಿದ್ದೇವೆ. ಆದರೆ ಇಲ್ಲೋರ್ವ ವ್ಯಕ್ತಿ ಬರೋಬ್ಬರಿ 10 ಬಗೆಯ ಅಪರೂಪದ ಹಾವುಗಳನ್ನು ಸಂಗ್ರಹಿಸಿ ಸಾಕಿದ್ದಾನೆ. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಸಂದೀಪ್ ಅಲಿಯಾಸ್ ದೀಪು ಬಂಧಿತ ಆರೋಪಿ. ಮೈಸೂರಿನ ರಾಜೀವ್ ನಗರದ ತನ್ನ ಮನೆಯಲ್ಲಿ ಅಕ್ರಮವಾಗಿ ವಿವಿಧ ರೀತಿಯ ಹಾವುಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದ. ಖಚಿತ ಮಾಹಿತಿ ಮೇರೆಗೆ ಆರೋಪಿ ಸಂದೀಪ್ ಅಲಿಯಾಸ್ ದೀಪು ಮನೆ ಮೇಲೆ ದಾಳಿ ನಡೆಸಿದ ಮೈಸೂರು ಸಿಐಡಿ ಅರಣ್ಯ ಸಂಚಾರಿ ದಳ ಸಿಬ್ಬಂದಿಗಳು ಸಂದೀಪ್ ನನ್ನು ಬಂಧಿಸಿದ್ದಾರೆ. ಅಲ್ಲದೇ ಹಾವುಗಳನ್ನು ವಶಕ್ಕೆ ಪಡೆದಿದ್ದಾರೆ.
ಸಂದೀಪ್ ಬಳಿ ಇದ್ದ ನಾಲ್ಕು ನಾಗರ ಹಾವು, ನಾಲ್ಕು ಮಣ್ಣುಮುಕ್ಕ ಹಾವು, ಎರಡು ಆಭರಣದ ಹಾವು, ಎರಡು ಗರಗಸ ಮಂಡಲ ಹಾವು, ಎರಡು ಕಟ್ಟಾವು, ಒಂದು ತೋಳದ ಹಾವು, ಒಂದು ನೀರು ಹಾವು, ಒಂದು ಪಚ್ಚೆ ಹಾವು, ಎರಡು ಕೇರೆ ಹಾವು ಹಾಗೂ ಎರಡು ಪುನುಗು ಬೆಕ್ಕನ್ನು ವಶಕ್ಕೆ ಪಡೆಯಲಾಗಿದೆ.
ಅಲ್ಲದೇ ಆರೋಪಿ ಬಳಿ ಇದ್ದ ಹಾವಿನ ವಿಷ ತೆಗೆಯುವ ಯಂತ್ರವನ್ನು ವಶಕ್ಕೆ ಪಡೆದು, ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.