ಮೈಸೂರು: ಸಾಂಸಕೃತಿಕ ನಗರಿ ಮೈಸೂರು ಒಂದೆಡೆ ದಸರಾ ಮಹೋತ್ಸವಕ್ಕೆ ಸಜ್ಜಾಗುತ್ತಿದೆ. ಇನ್ನೊಂದೆಡೆ ಮೈಸೂರಿನ ಹೊರವಲಯದಲ್ಲಿ ತಡರಾತ್ರಿ ರೇವ್ ಪಾರ್ಟಿ ಆಯೋಜನೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಕೆ.ಆರ್.ಎಸ್ ಹಿನ್ನೀರಿನ ಖಾಸಗಿ ಜಮೀನಿನಲ್ಲಿ ತಡರಾತ್ರಿ ನಡೆಯುತ್ತಿದ್ದ ಪಾರ್ಟಿ ಮೇಲೆ ಪೊಲೀಸರು ದಿಡೀರ್ ದಾಳಿ ನಡೆಸಿದ್ದಾರೆ. ಈ ವೇಳೆ ಪಾರ್ಟಿಯಲ್ಲಿ 150ಕ್ಕೂ ಹೆಚ್ಚು ಯುವಕ-ಯುವತಿಯರು ಭಾಗಿಯಾಗಿದ್ದರು. ಅಲ್ಲದೇ ಪಾರ್ಟಿಗೆ ಇಸ್ರೇಲ್ ನಿಂದ ರ್ಯಾಪರ್ ಒಬ್ಬರನ್ನು ಕರೆಸಲಾಗಿತ್ತು. ಪಾರ್ಟಿಯಲ್ಲಿ ಮದ್ಯ, ಸಿಗರೇಟ್ ನಂತಹ ಮಾದಕ ವಸ್ತುಗಳು ಪತ್ತೆಯಾಗಿವೆ.
ಪೊಲೀಸರು ದಾಳಿ ನಡೆಸುತ್ತಿದ್ದಂತೆ ಪಾರ್ಟಿಯಲ್ಲಿ ಭಾಗಿಯಾಗಿದ್ದವರು ಎದ್ದು, ಬಿದ್ದು ಓಡಿದ್ದಾರೆ. ಎಸ್ಕೇಪ್ ಆಗುವ ವೇಳೆ ಕೆಲವರು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ. ದಾಳಿ ವೇಳೆ 50 ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮೈಸೂರು ಎಸ್ ಪಿ ವಿಷ್ಣುವರ್ಧನ್, ಮೈಸೂರಿನಲ್ಲಿ ಪಾರ್ಟಿ ಒಂದರ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಯಾವುದೇ ಮಾದಕ ವಸ್ತುಗಳು ಪತ್ತೆಯಾಗಿಲ್ಲ. ಆದರೆ ಮದ್ಯ, ಸಿಗರೇಟ್ ನಂತಹ ವಸ್ತುಗಳು ಪತ್ತೆಯಾಗಿವೆ. ವಶಕ್ಕೆ ಪಡೆದವರು ಮಾದಕ ವಸ್ತು ಸೇವಿಸಿದ್ದರಾ? ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ. ರಕ್ತದ ಮಾದರಿ ಸಂಗ್ರಹಿಸಲಾಗಿದ್ದು, ವರದಿ ಬಂದ ಬಳಿಕ ತಿಳಿಯಲಿದೆ ಎಂದಿದ್ದಾರೆ. ಸ್ಥಳದಲ್ಲಿ ಎಫ್ ಎಸೆಲ್ ತಂಡ ಕೂಡ ಭೇಟಿ ನೀಡಿ ಪರಿಶೀಲಿಸಿದೆ ಎಂದು ತಿಳಿಸಿದ್ದಾರೆ.