ಮೈಸೂರು: ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಕೆತ್ತನೆಗೆ ಶಿಲೆ ಸಿಕ್ಕ ಜಾಗ ಮೈಸೂರಿನ ಹಾರೋಹಳ್ಳಿ ಗಯಜ್ಜೆಗೌಡನಪುರದಲ್ಲಿ ಇಂದು ರಾಮ ಮಂದಿರ ನಿರ್ಮಾಣಕ್ಕಾಗಿ ಗುದ್ದಲಿ ಪೂಜೆ ನಡೆಯುತ್ತಿದೆ.
ರಾಮಲಲ್ಲಾ ವಿಗ್ರಹಕ್ಕೆ ಕೃಷ್ಣ ಶಿಲೆ ಸಿಕ್ಕ ಜಾಗ ಮೈಸೂರಿನ ಹಾರೋಹಳ್ಳಿಯ ಗಯಜ್ಜೇಗೌಡಪುರದ ರಾಮದಾಸ್ ಎಂಬುವವರ ಜಮೀನಿನ ಸ್ಥಳ. ಶಿಲೆ ಸಿಕ್ಕ ಜಾಗದಲ್ಲಿ ಮಂದಿರ ನಿರ್ಮಾಣ ಮಾಡುವುದಾಗಿ ಶಾಸಕ ಜಿ.ಟಿ.ದೇವೇಗೌಡ ಘೋಷಿಸಿದ್ದರು. ಅಲ್ಲದೇ ಇಂದು ಇಲ್ಲಿ ಸಿಕ್ಕ ಕೃಷ್ಣ ಶಿಲೆಯಲ್ಲಿಯೇ ನಿರ್ಮಾಣವಾಗಿರುವ ಬಾಲರಾಮನ ವಿಗ್ರಹ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಕೃಷ್ಣ ಶಿಲೆ ಸಿಕ್ಕ ಜಾಗದಲ್ಲಿ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ.
ಈ ಕಾರ್ಯಕ್ರಮಕ್ಕೆ ಸಂಸದ ಪ್ರತಾಪ್ ಸಿಂಹ ಆಗಮಿಸಿದ್ದು, ಈ ವೇಳೆ ಕೆಲ ಸ್ಥಳೀಯರು ಪ್ರತಾಪ್ ಸಿಂಹಗೆ ಘೇರಾವ್ ಹಾಕಿ ಘೋಷಣೆ ಕೂಗಿದ್ದಾರೆ. ಮಹಿಷ ದಸರಾಗೆ ವಿರೋಧ ನೆಪ ಹೇಳಿ ಅಪಮಾನ ಮಾಡಿದ್ದೀರಾ ಎಂದು ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಘಟನೆಯಿಂದ ಬೇಸರಗೊಂಡ ಸಂಸದ ಪ್ರತಾಪ್ ಸಿಂಹ ಕಾರ್ಯಕ್ರಮದಲ್ಲಿ ಭಾಗಿಯಾಗದೇ ವಾಪಾಸ್ ಆಗಿದ್ದಾರೆ