ಮೈಸೂರು: ಮೈಸೂರು ಅರಮನೆ ಮುಂಭಾಗ ಪಾರಿವಾಳಗಳಿಗೆ ಆಹಾರ ಹಾಕುವುದನ್ನು ನಿಲ್ಲಿಸಲು ಸಾರ್ವಜನಿಕರು ನಿರ್ಧಾರ ಕೈಗೊಂಡಿದ್ದಾರೆ.
ಪಾರಿವಾರಗಳಿಂದ ಪಾರಂಪರಿಕ ಕಟ್ಟಡ, ವಾಸ್ತುಶಿಲ್ಪಗಳಿಗೆ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಪಾರಿವಾಳಗಳಿಗೆ ಅರಮೆನೆ ಮುಂದೆ ಆಹಾರ ಹಾಕುವ ಪದ್ಧತಿ ಬಂದ್ ಮಾಡಲು ನಿರ್ಧರಿಸಲಾಗಿದೆ.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೇತೃತ್ವದಲ್ಲಿ ಸಾರ್ವಜನಿಕರು, ತಜ್ಞರು ಹಾಗೂ ಖಬೂತರ್ ದಾನ್ ಜೈನ್ ಸಂಘಟನೆ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಈ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಪಾರಿವಾಳಗಳಿಗೆ ಆಹಾರ ಹಾಗೂ ಕಾಳು ಹಾಕುವುದನ್ನು ನಿಲ್ಲಿಸುವ ನಿಟ್ಟಿನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಈ ಬಗ್ಗೆ ಮಾತನಾಡಿರುವ ಖಬೂತರ್ ದಾನ್ ಜೈನ್ ಸಂಘಟನೆ ಮುಖ್ಯಸ್ಥ ವಿನೋದ್, ಪಾರಿವಾಳಗಳಿಗೆ ಆಹಾರ, ಕಾಳು ಹಾಕುವುದರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ನಾವು ಚರ್ಚೆ ನಡೆಸಿದ್ದೇವೆ. ಹಲವು ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. ಇನ್ನುಮುಂದೆ ಪಾರಿವಾಳಗಳಿಗೆ ಅರಮನೆ ಮುಂದೆ ಅಹಾರ ಹಾಕುವುದನ್ನು ನಿಲ್ಲಿಸಲಾಗುವುದು ಎಂದರು.
ಪಾರಿವಾಳಗಳ ಇಕ್ಕೆಯಿಂದ ಅರಮನೆ ಸುತ್ತಮುತ್ತಲಿನ ಪ್ರತಿಮೆಗಳಿಗೆ ಹಾಗೂ ಅರಮೆಗೆ ತೊಂದರೆಯಾಗುತ್ತಿದೆ. ಪಾರಿವಾಳಗಳ ಇಕ್ಕೆಯಿಂದ ಬಿಡುಗಡೆಯಾಗುವ ಯೂರಿಕ್ ಆಸಿಡ್ ಪಾರಂಪರಿಕ ಕಟ್ಟಡಕ್ಕೆ ಧಕ್ಕೆಯಾಗುತ್ತದೆ. ಅರಮನೆಯ ಸುತ್ತಲಿನ ಮಹಾರಾಜರ ಪ್ರತಿಮೆಗಳ ಮೇಲೆ ಕುಳಿತು ಇಕ್ಕೆ ಹಾಕುವುದರಿಂದ ಪ್ರತಿಮೆಗಳು ಹಾಳಾಗುತ್ತವೆ. ಪಾರಿವಾರಗಳು ತನ್ನ ಆಹಾರವನ್ನು ನೈಸರ್ಗಿಕವಾಗಿ ಹುಡುಕಿಕೊಳ್ಳುತ್ತವೆ. ಹುಟ್ಟು ಹಬ್ಬ, ವೆಡ್ಡಿಂಗ್ ಫೋಟೋಶೂಟ್ ಎಂದು ಅರಮನೆ ಮುಂಭಾಗದಲ್ಲಿ ಪಾರಿವಾಳಗಳಿಗೆ ಯಾರೂ ಆಹಾರ, ಕಾಳುಗಳನ್ನು ಹಾಕುವಂತಿಲ್ಲ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.