ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾಗೆ ಚಾಲನೆ ದೊರೆತಿದೆ. ದಸರಾ ಉದ್ಘಾಟನೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈಸೂರು ದಸರಾದ ಹಳೆ ನೆನಪುಗಳನ್ನು ಮೆಲುಕು ಹಾಕಿದರು.
ವಿಜಯನಗರ ಸಾಮ್ರಾಜ್ಯದ ವೈಭವದ ಕಾಲಗಳನ್ನು ನೆನಪಿಸಿಕೊಂಡ ಸಿಎಂ ಸಿದ್ದರಾಮಯ್ಯ, ವಿಜಯನಗರ ಸಾವಂತರು ದಸರಾ ಮಹೋತ್ಸವವನ್ನು ಮಾಡುತ್ತಿದ್ದರು. ವಿಜಯನಗರ ಸಾಮ್ರಾಜ್ಯ ಶಾಂತಿ, ಸಮೃದ್ಧಿಯಿಂದ ಕೂಡಿದ ನಾಡಾಗಿತ್ತು. ಹಂಪಿ ವಿರೂಪಾಕ್ಷ ದೇವಾಲಯದ ರಸ್ತೆಯಲ್ಲಿ ಮುತ್ತು, ರತ್ನಗಳನ್ನು ಅಳೆಯುತ್ತಿದ್ದರು. ವಿಜಯನಗರ ಸಾಮ್ರಾಜ್ಯ ಪತನದ ಬಳಿಕ ಮೈಸೂರಿನ ಅರಸರು ದಸರಾ ಹಬ್ಬವನ್ನು ಆಚರಿಸಲಾರಂಭಿಸಿದರು.
ಮೈಸೂರಿಗೂ ಮೊದಲು ಶ್ರೀರಂಗಪಟ್ಟಣದಲ್ಲಿ ದಸರಾ ಹಬ್ಬವನ್ನು ಆಚರಿಸಲಾಗುತ್ತಿತ್ತು. ಹಿಂದೆ ಮೈಸೂರು ಅರಸರು ಆನೆಯ ಅಂಬಾರಿ ಮೇಲೆ ಕುಳಿತು ಸಾಗುತ್ತಿದ್ದರು. ಚಿಕ್ಕಂದಿನಲ್ಲಿ ನನ್ನ ತಂದೆಯ ಹೆಗಲ ಮೇಲೆ ಕುಳಿತು ಜಂಬೂ ಸವಾರಿಯನ್ನು ವೀಕ್ಷಿಸಿದ್ದೆ ಎಂದು ಹೇಳಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಬಾಲ್ಯದಲ್ಲಿನ ಮೈಸೂರು ದಸರಾ ಆಚರಣೆಯ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.