ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿಯೂ ಭ್ರಷ್ಟಾಚಾರ ನಡೆಯುತ್ತಿರುವ ಆರೋಪ ಕೇಳಿಬಂದಿದೆ. ಅಂತರಾಷ್ಟ್ರೀಯ ಮಟ್ಟದ ಖ್ಯಾತಿಯ ಸರೋದ್ ವಾದಕರ ಬಳಿ ಅಧಿಕಾರಿಗಳೇ ಕಮಿಷನ್ ಗೆ ಕೈವೊಡ್ಡಿದ್ದಾರೆ ಎಂಬ ಆರೋಪ ಭಾರಿ ಚರ್ಚೆಗೆ ಕಾರಣವಾಗಿದೆ.
ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಕಾರ್ಯಕ್ರಮ ನೀಡಲು ಅಂತರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ಪಂ.ರಾಜೀವ ತಾರಾನಾಥ್ ಅವರನ್ನು ಆಹ್ವಾನಿಸಲಾಗಿತ್ತು. ಅರಮನೆ ವೇದಿಕೆ ಕಾರ್ಯಕ್ರಮದಲ್ಲಿ ಸರೋದ್ ವಾದನ ಕಾರ್ಯಕ್ರಮ ನೀಡಲು ಆಹ್ವಾನ ನೀಡಿದ ಅದಿಕಾರಿಗಳು ಕಮಿಷನ್ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ತಾರಾನಾಥ್ ಅವರನ್ನು ಸಂಪರ್ಕಿಸಿದ ಅಧಿಕಾರಿಗಳು ನಿಮ್ಮ ಸಂಭಾವನೆಗಿಂತ ಮೂರು ಲಕ್ಷ ಹೆಚ್ಚು ಕೊಡುತ್ತೇವೆ. ಆದರೆ ಹೆಚ್ಚುವರಿಯಾಗಿ ಜಮೆ ಅಗಿರುವ 3 ಲಕ್ಷ ರೂ ಹಣವನ್ನು ನಮಗೆ ವಾಪಸ್ ನೀಡಬೇಕು ಎಂದು ಕೇಳಿದ್ದಾರಂತೆ. ಇದಕ್ಕೆ ತಾರಾನಾಥ್ ನಿರಾಕರಿಸಿದ್ದು, ಇದೇ ಕಾರಣಕ್ಕಾಗಿ ಅವರನ್ನು ಕಾರ್ಯಕ್ರಮದಿಂದ ಕೈಬಿಡಲಾಗಿದೆ ಎಂದು ತಿಳಿದುಬಂದಿದೆ.
ದಸರಾ ಕಾರ್ಯಕ್ರಮದಲ್ಲಿ ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ, ಕೆಲ ಅಧಿಕಾರಿಗಳನ್ನು ತಾರಾನಾಥ್ ಅವರ ಬಳಿ ಕಳುಹಿಸಿ ಮಾಹಿತಿ ಸಂಗ್ರಹಿಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದಾರೆ.