ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾಗೆ ಕ್ಷಣಗಣನೆ ಆರಂಭವಾಗಿದ್ದು, ಸಾಂಸ್ಕೃತಿಕ ನಗರಿಯಲ್ಲಿ ಭರ್ಜರಿ ಸಿದ್ಧತೆ ನಡೆದಿದೆ. ಈ ನಡುವೆ ಕೆ.ಎಸ್.ಆರ್.ಟಿ.ಸಿ ದಸರಾ ವೀಕ್ಷಣೆಗೆ ಬರುವವರಿಗಾಗಿ ವಿಶೇಷ ಪ್ಯಾಕೇಜ್ ಟೂರ್ ಘೋಷಣೆ ಮಾಡಿದೆ.
ದಸರಾ ವೀಕ್ಷಣೆಗೆ ಬರುವ ಪ್ರವಾಸಿಗರಿಗಾಗಿ ಕೆ.ಎಸ್.ಆರ್.ಟಿ.ಸಿ ಟೂರ್ ಪ್ಯಾಕೇಜ್ ಘೋಷಿಸಿದ್ದು, ಗಿರಿದರ್ಶಿನಿ, ದೇವದರ್ಶಿನಿ, ಜಲದರ್ಶಿನಿ ಹಾಗೂ ಕೊಡಗು ಟ್ರಿಪ್ ಆಯೋಜನೆ ಮಾಡಿದೆ.
ಅಕ್ಟೋಬರ್ 20ರಿಂದ 26ವರೆಗೆ ಈ ಪ್ಯಾಕೇಜ್ ಸೇವೆಗಳು ಲಭ್ಯವಿರಲಿದ್ದು, ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸಾರಿಗೆಯ ವೇಗದೂತ, ರಾಜಹಂಸ, ಸ್ಲೀಪರ್ ಬಸ್, ಐರಾವತ, ಐರಾವತ ಕ್ಲಬ್ ಕ್ಲಾಸ್ ಇ.ವಿ.ಪವರ್ ಪ್ಲಸ್, ಅಂಬಾರಿ ಕ್ಲಬ್ ಕ್ಲಾಸ್, ಅಂಬಾರಿ ಉತ್ಸವ್, ಹಾಗೂ ಪಲ್ಲಕ್ಕಿ ಉತ್ಸವ್ ಸಾರಿಗೆ ಸೇವೆಗಳ ಜೊತೆಗೆ ವಿಶೇಷ ಪ್ಯಾಕೇಜ್ ಸಾರಿಗೆ ಸೇವೆಗಳ ಸೌಲಭ್ಯವನ್ನು ಒದಗಿಸಲಾಗುತ್ತಿದೆ.
ಕರ್ನಾಟಕ ಸಾರಿಗೆ ನಿಗಮದಿಂದ ಒಂದು ದಿನದ ವಿಶೇಷ ಪಾಕೇಜ್ ಟೂರ್ ಇದಾಗಿದೆ. ಗಿರಿದರ್ಶಿನಿ, ದೇವದರ್ಶಿನಿ, ಜಲದರ್ಶಿನಿ, ಕೊಡಗು ಟ್ರಿಪ್ ನಲ್ಲಿ ಯಾವೆಲ್ಲ ಸ್ಥಳಗಳು ಇವೆ? ಇಲ್ಲಿದೆ ಮಾಹಿತಿ:
ಗಿರಿದರ್ಶಿನಿ: ಬಂಡಿಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿ ರಂಗನ ಬೆಟ್ಟ, ನಂಜನಗೂಡು, ಚಾಮುಂಡಿ ಬೆಟ್ಟ. ಪ್ರಯಾಣ ದರ ವಯಸ್ಕರರಿಗೆ 400 ರೂ ಹಾಗೂ ಮಕ್ಕಳಿಗೆ 250 ರೂ.
ಜಲದರ್ಶಿನಿ: ಗೋಲ್ಡನ್ ಟೆಂಪಲ್, ದುಬಾರೆ ನಿಸರ್ಗಧಾಮ, ರಾಜಾಸೀಟ್, ಹಾರಂಗಿ ಜಲಾಶಯ, ಕೆ.ಆರ್.ಎಸ್. ಪ್ರಯಾಣ ದರ ವಯಸ್ಕರರಿಗೆ 450 ರೂ ಹಾಗೂ ಮಕ್ಕಳಿಗೆ 250 ರೂ.
ದೇವದರ್ಶಿನಿ: ನಂಜನಗೂಡು, ಬ್ಲಪ್, ಮುಡುಕುತೊರೆ, ತಲಕಾಡು, ಸೋಮನಾಥಪುರ, ಶ್ರೀರಂಗಪಟ್ಟಣ. ಪ್ರಯಾಣ ದರ ವಯಸ್ಕರರಿಗೆ 400 ರೂ ಹಾಗೂ ಮಕ್ಕಳಿಗೆ 250 ರೂ.
ಕೊಡಗು: ನಿಸರ್ಗಧಾಮ, ಗೋಲ್ಡನ್ ಟೆಂಪಲ್, ಹಾರಂಗಿ, ರಾಜಾಸೀಟ್, ಅಬ್ಬಿಫಾಲ್ಸ್. ಪ್ರಯಾಣ ದರ ವಯಸ್ಕರರಿಗೆ 1200 ರೂ ಹಾಗೂ ಮಕ್ಕಳಿಗೆ 1000 ರೂ.