ಮೈಸೂರು: ನಾಡಿನೆಲ್ಲೆಡೆ ವಿಜಯದಶಮಿ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣೆ ಆರಂಭವಾಗಿದೆ. ಜಂಬೂಸವಾರಿ ಹಾಗೂ ಸಾಂಸ್ಕೃತಿಕ ಕಲಾ ತಂಡಗಳ ಚಾಲನೆಗೂ ಮುನ್ನ ಸಿಎಂ ಸಿದ್ದರಾಮಯ್ಯ ನಂದಿಧ್ವಜಕ್ಕೆ ಪುಷ್ಪಾರ್ಚನೆ ಮಾಡಿದರು.
ಮೈಸೂರು ಅರಮನೆಯ ಬಲರಾಮ ದ್ವಾರದಲ್ಲಿ ಶುಭ ಮಕರ ಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ ನಂದಿಧ್ವಜಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಹೆಚ್.ಸಿ.ಮಹದೇವಪ್ಪ, ಮಂಕಾಳು ವೈದ್ಯ, ಲಕ್ಷ್ಮೀ ಹೆಬ್ಬಾಳ್ಕರ್ ಉಪಸ್ಥಿತರಿದ್ದರು.
ನಂದಿಧ್ವಜಕ್ಕೆ ಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಬಾರಿ ಉತ್ತಮ ಮಳೆಯಾಗಿದೆ. ಅದ್ಧೂರಿಯಾಗಿ ದಸರಾ ಮಹೋತ್ಸವ ನಡೆಯುತ್ತಿದೆ. ದುಷ್ಟರ ಸಂಹಾರ ಶಿಷ್ಠರ ರಕ್ಷಣೆ ಮಾಡುವುದು ತಾಯಿ ಚಾಮುಂಡಿ. ವಿಜಯನಗರ ಅರಸರ ಕಾಲದಿಂದ ನಡೆಯುತ್ತಾ ಬಂದಿದ್ದ ದಸರಾ ನವರಾತ್ರಿ ಉತ್ಸವವನ್ನು ಮೈಸೂರು ಅರಸರು ಮುಂದುವರೆಸಿದರು. ಸರ್ಕಾರದ ಆಡಳಿತ ಆರಂಭವಾದ ಬಳಿಕ ಈಗ ಸರ್ಕಾರ ನಡೆಸುತ್ತಾ ಬಂದಿದೆ ಎಂದು ತಿಳಿಸಿದರು.