ಮೈಸೂರು: ವಿಶ್ವ ವಿಖ್ಯಾತ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾಡ ಅದಿದೇವತೆ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ಅಂಬಾರಿಯಲ್ಲಿ ವಿರಾಜಮಾನವಾಗಿರುವ ತಾಯಿ ಚಾಮುಂಡಿ ದೇವಿ ವಿಗ್ರಹಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಹೆಚ್.ಸಿ.ಮಹದೇವಪ್ಪ, ಶಿವರಾಜ್ ತಂಗಡಗಿ, ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವರು ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು.
ಚಿನ್ನದ ಅಂಬಾರಿಯಲ್ಲಿ ನಾಡ ಅದಿದೇವತೆ ತಾಯಿ ಚಾಮುಂಡೇಶ್ವರಿ ವಿರಾಜಮಾನವಾಗಿದ್ದು, 750ಕೆಜಿ ಚಿನ್ನದ ಅಂಬಾರಿಯನ್ನು ಹೊತ್ತು ಅಭಿಮನ್ಯು ಆನೆ ರಾಜಗಾಂಭೀರ್ಯದಿಂದ ಮೆರವಣಿಗೆಯಲ್ಲಿ ಸಾಗಿದೆ. ಕ್ಯಾಪ್ಟನ್ ಅಭಿಮನ್ಯು ಆನೆ 5ನೇ ಬಾರಿ ಅಂಬಾರಿಯನ್ನು ಹೊತ್ತು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದೆ. ಅಭಿಮನ್ಯು ಆನೆಗೆ ಕುಮ್ಕಿ ಆನೆಗಳಾದ ಹಿರಣ್ಯ, ಲಕ್ಷ್ಮೀ ಆನೆ ಸೇರಿದಂತೆ ಒಟ್ಟು 9 ಆನೆಗಳು ಸಾಥ್ ನೀಡಿವೆ.
ಜಂಬೂ ಸವಾರಿ ಮೆರವಣಿಗೆಯಲ್ಲಿ ಈ ಬಾರಿ 51 ಸ್ತಬ್ಧಚಿತ್ರಗಳು, ಸಾಂಸ್ಕೃತಿಕ ಕಲಾತಂಡಗಳು ಭಾಗಿಯಾಗಿವೆ. ಅರಮನೆಯಿಂದ ಹೊರಟ ಜಂಬೂ ಸವಾರಿ ಮೆರವಣಿಗೆ ಬನ್ನಿಮಂಟಪದವರೆಗೂ 5 ಕಿ.ಮೀ ದೂರ ಸಾಗಲಿದೆ.