
ಮೈಸೂರು : ಮೈಸೂರು ಚಾಮುಂಡಿ ಬೆಟ್ಟದಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾಗೆ ಸಂಗೀತ ನಿರ್ದೇಶಕ ಹಂಸಲೇಖ ಅಧಿಕೃತ ಚಾಲನೆ ನೀಡಿದ್ದಾರೆ.
ಮೈಸೂರು ದಸರಾಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಹಂಸಲೇಖ, ಪೂಜ್ಯ ಕನ್ನಡಕ್ಕೆ, ಪೂಜ್ಯ ಕನ್ನಡಿಗರಿಗೆ ನಮನ . ಈ ಅವಕಾಶಕ್ಕಾಗಿ ನಾನು ಸಾವಿರಾರು ಮೆಟ್ಟಿಲುಗಳನ್ನು ಹತ್ತಿ ಬಂದಿದ್ದೇನೆ. ಅಪ್ಪ ಗೋವಿಂದರಾಜು, ಅವ್ವ ರಾಜಮ್ಮ ನೆನೆಯಲೇ? ನನ್ನ 50 ವರ್ಷದ ಹಾದಿಯಲ್ಲಿ ಈ ಅವಕಾಶ ಸಿಕ್ಕಿದೆ ಎಂದರು.
ಪೂಜ್ಯ ಕನ್ನಡಿಗರಿಗೆ ಪೂಜ್ಯ ಕನ್ನಡಕ್ಕೆ ಈ ದೇವಾಲಯ ಪ್ರೇಮಾಲಯಕ್ಕೆ ಸಾವಿರದ ಶರಣುಗಳು. ಕರ್ನಾಟಕ ಏಕೀಕರಣವಾಗಿ ಐವತ್ತುವರ್ಷ ವಾಯಿತು.ಕರ್ನಾಟಕದ ಐದಶದ ಜೊತೆಗೆ ನನ್ನ ಕಲಾ ಕಾಯಕಲ್ಪಕ್ಕೂ 50 ವರ್ಷವಾಗಿದೆ. ಈ ನನ್ನ ಐದಶದಲ್ಲಿ ಸಿಕ್ಕಿದ ಈ ಅವಕಾಶ ಬಹಳ ಬೆಲೆ ಬಾಳುವಂತಹದ್ದು. ಈ ಅವಕಾಶಕ್ಕಾಗಿ ನಿರಾಯಾಸವಾಗಿ ಬಂದಿಲ್ಲ. ಇದಕ್ಕಾಗಿ ಸಾವಿರ ಮೆಟ್ಟಿಲು ಹತ್ತಿ ಬಂದಿದ್ದೇನೆ ಎಂದು ಹೇಳಿದರು.
ದಸರಾ ಎನ್ನುವುದು ಜೀವಂತ ಮಹಾಕಾವ್ಯ. ದಕ್ಷಿಣ ಭಾರತದ ವೀರರ ಕಥೆಯೆ ಈ ಮಹಾಕಾವ್ಯ, ವಿಜಯನಗರದ ಮಹಾಸಾಮ್ರಾಜ್ಯದಿಂದ ಆರಂಭವಾಗಿದೆ. ದಸರಾ ಒಂದು ರೀತಿ ಕಥಾ ಕಣಜ. ಇದು ಮಹಾಕಾವ್ಯವಾಗಿ ಬೆಳಗಬೇಕು. ಕನ್ನಡ ನಮ್ಮ ಶೃತಿ ಆಗಬೇಕು ಅಭಿವೃದ್ಧಿ ನಮ್ಮ ಕೃತಿ ಆಗಬೇಕು ಎಂದರು.