ಮೈಸೂರು : ಮೈಸೂರು ದಸರಾ ಹಿನ್ನೆಲೆ ಅ. 15 ರಿಂದ 24 ರವರೆಗೆ ದಸರಾ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ.
ಮೈಸೂರಿನ ಕುಪ್ಪಣ್ಣ ಪಾರ್ಕ್ನಲ್ಲಿ ಈ ಬಾರಿ ಅಕ್ಟೋಬರ್ 15 ರಿಂದ 24ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಈ ಬಾರಿ 2 ಲಕ್ಷ ಗುಲಾಬಿ ಹೂವುಗಳಿಂದ ಚಂದ್ರಯಾನದ ಪರಿಕಲ್ಪನೆಯ ಕಲಾಕೃತಿ ನಿರ್ಮಾಣ ಮಾಡಲಾಗುತ್ತದೆ ಎಂದು ಮೈಸೂರು ಜಿಲ್ಲಾ ಪಂಚಾಯ್ತಿ ಸಿಇಒ ಗಾಯತ್ರಿ ಮಾಹಿತಿ ನೀಡಿದ್ದಾರೆ.
ಇದಲ್ಲದೇ ಚಾಮುಂಡೇಶ್ವರಿ ದೇವಿ ಹಾಗೂ ದೇವಸ್ಥಾನದ ಗೋಪುರ, ಕಾಫಿ ಕಪ್ ಹೂವಿನ ಕಲಾಕೃತಿ, ಸುವರ್ಣ ಕರ್ನಾಟಕ – ಕರ್ನಾಟಕದ ಶ್ರೀಮಂತ ಪರಂಪರೆ, ಅಂಬಾರಿ ಹೂವಿನ ಕಲಾಕೃತಿ, ಈ ಬಾರಿಯ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಲಿದೆ ಎಂದರು.
ವಿಶ್ವವಿಖ್ಯಾತ ಮೈಸೂರು ದಸರಾ 2023 ಭರ್ಜರಿ ಸಿದ್ಧತೆ ನಡೆದಿದ್ದು, ಮೈಸೂರಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ನಾಡಹಬ್ಬ ದಸರಾ ಮಹೋತ್ಸವದ ಅಧಿಕೃತ ಆಹ್ವಾನ ಪತ್ರಿಕೆಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ನಾಡದೇವತೆ ತಾಯಿ ಚಾಮುಂಡೇಶ್ವರಿ, ಚಾಮುಂಡಿಬೆಟ್ಟ, ಅರಮನೆ, ಗಜಪಡೆಯ ಭಾವಚಿತ್ರವನ್ನೊಳಗೊಂಡ ಆಕರ್ಷಕ ಆಹ್ವಾನ ಪತ್ರಿಕೆ ಬಿಡುಗಡೆಯಾಗಿದೆ.ನಾಡಹಬ್ಬ ದಸರಾ ಅಕ್ಟೋಬರ್ 15 ರಂದು ಉದ್ಘಾಟನೆಯಾಗಲಿದ್ದು, ಅಕ್ಟೋಬರ್ 24 ರಂದು ವಿಶ್ವವಿಖ್ಯಾತ ಜಂಬೂ ಸವಾರಿಯೊಂದಿಗೆ ಮುಕ್ತಾಯಗೊಳ್ಳಲಿದೆ.