ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಅ.15 ರಂದು ದಸರಾಗೆ ಅದ್ದೂರಿಯಾಗಿ ಚಾಲನೆ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದಲ್ಲಿ ನಡೆದ ದಸರಾ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.
ಈ ಬಾರಿ ಅದ್ದೂರಿಯಾಗಿ ದಸರಾ ಆಚರಣೆ ನಡೆಸಲು ತೀರ್ಮಾನಿಸಲಾಗಿದೆ. . ದಸರಾದಲ್ಲಿ ಪ್ರಮುಖವಾಗಿ ದೀಪಾಲಂಕಾರ ಇರುತ್ತದೆ ಎಂದರು. ಈ ಬಾರಿ ದೀಪಾಲಂಕಾರ ದಸರಾ ಉದ್ಘಾಟನೆಯಾದ ದಿನದಿಂದ ದಸರಾ ಮುಗಿಯುವವರೆಗೂ ಹಾಗೂ ನಂತರ ಒಂದು ವಾರದವವರೆಗೆ ದೀಪಾಲಂಕಾರ ಇರಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.
ಈ ಬಾರಿಯ ದಸರಾ ಸ್ಥಬ್ದಚಿತ್ರದಲ್ಲಿ ರಾಜ್ಯದ ಪರಂಪರೆ, ಜಿಲ್ಲಾ ವಿಶೇಷತೆ ಹಾಗೂ ನಮ್ಮ ಸರ್ಕಾರದ ಐದು ಗ್ಯಾರಂಟಿ ಸ್ಥಬ್ಧ ಚಿತ್ರ ಇರಲಿವೆ. ಅಕ್ಟೋಬರ್ 15ರಂದು ದಸರಾ ಮಹೋತ್ಸವ ಉದ್ಘಾಟನೆ ಆಗಲಿದೆ. ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ದಸರಾ ಉದ್ಘಾಟನೆ ಆಗುತ್ತೆ.. ವಸ್ತು ಪ್ರದರ್ಶನ ಕೂಡ ಅಂದೇ ಆರಂಭ ಆಗಲಿದೆ. ಈ ಬಾರಿಯ ಮೈಸೂರು ದಸರಾ ವೇಳೆ ಏರ್ ಶೋ ನಡೆಸುವ ಚಿಂತನೆ ಇದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಜೊತೆ ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ವಿಶ್ವವಿಖ್ಯಾತ ಮೈಸೂರು ದಸರಾ ಮೆರವಣಿಗೆಯಲ್ಲಿ ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳ ಸ್ಥಬ್ಧ ಚಿತ್ರಗಳು ಕೂಡ ರಾರಾಜಿಸಲಿವೆ.ಶಕ್ತಿ ಯೋಜನೆ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಗ್ಯಾರಂಟಿ ಯೋಜನೆಗಳ ಸ್ತಬ್ಧ ಚಿತ್ರಗಳು ಈ ಬಾರಿ ದಸರಾ ಮೆರವಣಿಗೆಯಲ್ಲಿ ಇರಲಿವೆ ಎಂದು ಹೇಳಿದ್ದಾರೆ.
ಅರ್ಥಪೂರ್ಣವಾಗಿ ಮತ್ತು ಅದ್ದೂರಿಯಾಗಿ ದಸರಾ ಮಹೋತ್ಸವ ಆಚರಿಸಲು ಸದಸ್ಯರು ಸಲಹೆ ನೀಡಿದ್ದಾರೆ. ಮೈಸೂರು ದಸರಾ ಉದ್ಘಾಟಕರ ಆಯ್ಕೆಯ ಬಗ್ಗೆ ನನಗೆ ಹೊಣೆ ನೀಡಿದ್ದಾರೆ. ದಸರಾ ಪೂರ್ವಭಾವಿ ಸಭೆಯಲ್ಲಿ ಒಬ್ಬರ ಹೆಸರಿನ ಕುರಿತು ಚರ್ಚೆ ಮಾಡಿದ್ದೇವೆ. ಕೆಆರ್ ಕ್ಷೇತ್ರದ ಶಾಸಕ ಸುತ್ತೂರು ಶ್ರೀಗಳ ಹೆಸರು ಪ್ರಸ್ತಾಪಿಸಿದ್ದಾರೆ. ಆದರೆ, ಮೈಸೂರು ದಸರಾ ಉದ್ಘಾಟಕರ ಹೆಸರು ಅಂತಿಮವಾಗಿಲ್ಲ. ಮುಂದೆ ಚರ್ಚೆ ನಡೆಸಿ ಯಾರು ದಸರಾ ಉದ್ಘಾಟಿಸಬೇಕೆಂದು ತೀರ್ಮಾನ ಕೈಗೊಳ್ಳುತ್ತೇವೆ ಎಂದರು.