
ಬೆಂಗಳೂರು: ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಘಟನೆ ಖಂಡಿಸಿ ನಾಳೆ ಬಿಜೆಪಿಯಿಂದ ಮೈಸೂರು ಚಲೋ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲಾವಗಿದೆ. ಪೊಲೀಸ್ ಠಾಣೆಗೆ ಪುಡಾರಿಗಳು ನುಗ್ಗಿ ದಾಂಧಲೆ ಮಾಡಿದ್ದಾರೆ. ಅಂತವರನ್ನು ರಕ್ಷಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇದನ್ನು ಖಂಡಿಸಿ ಮೈಸೂರು ಚಲೋ ನಡೆಸುತ್ತಿದ್ದೇವೆ ಎಂದರು.
ಬೆಂಗಳೂರಿನಲ್ಲಿ ದರೋಡೆ, ಕೊಲೆ, ಅತ್ಯಾಚಾರಘಟನೆಗಳು ನಡೆಯುತ್ತಿವೆ. ಬೆಂಗಳೂರು ಸುರಕ್ಷಿತವಾಗಿಲ್ಲ. ಇದೆಲ್ಲದಕ್ಕೂ ರಾಜ್ಯ ಸರ್ಕಾರವೇ ಹೊಣೆ ಎಂದು ಕಿಡಿಕಾರಿದರು.
ಗೃಹ ಸಚಿವರು ತಾವು ರಾಜೀನಾಮೆ ಕೊಡಲು ಸಿದ್ಧ ಎಂಬ ಧಾಟಿಯಲ್ಲಿ ಮಾತನಾಡಿದ್ದಾರೆ. ಇದು ಅವಿವೇಕದ ಪರಮಾವಧಿ. ಕಾನೂನು ಸುವ್ಯವಸ್ಥೆ ಕಾಪಾಡಿ, ರಾಜ್ಯದ ಅಭಿವೃದ್ಧಿ ಮಾಡಿ ಎಂದು ಜನರು ನಿಮಗೆ ಆಶಿರ್ವಾದ ಮಾಡಿದರೆ ಈಗ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಬಿಟ್ಟು ಈ ರೀತಿ ಹೇಳಿಕೆ ಕೊಡುತ್ತಿದ್ದರೆ ದೇಶದ್ರೋಹಿಗಳು, ಕೊಲೆಗೆಡುಕರಿಗೆ ಆನೆಬಲ ಬಂದಂತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.