ಸಂಚಾರಿ ನಿಯಮಗಳಲ್ಲಿ ಸಾಕಷ್ಟು ಬದಲಾವಣೆಗಳಾಗ್ತಿರುತ್ತವೆ. ರಸ್ತೆ ಅಪಘಾತ ತಪ್ಪಿಸಲು ಸರ್ಕಾರ ಅನೇಕ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಬೈಕ್ ಅಥವಾ ಸ್ಕೂಟಿಯಲ್ಲಿ ಮಕ್ಕಳನ್ನು ಕರೆದೊಯ್ಯುವ ಪಾಲಕರಿಗೆ ಮಹತ್ವದ ಸುದ್ದಿಯೊಂದಿದೆ. ದ್ವಿಚಕ್ರ ವಾಹನದಲ್ಲಿ ಪತ್ನಿ ಹಾಗೂ ಮಗುವಿದ್ದರೆ ನೀವು ದಂಡ ತೆರಬೇಕಾಗುತ್ತದೆ.
ನಾಲ್ಕು ವರ್ಷ ಮೇಲ್ಪಟ್ಟ ಮಕ್ಕಳ ಜೊತೆ ಮೂವರ ಸವಾರಿ, ಮಗು ಹೆಲ್ಮೆಟ್ ಧರಿಸದೆ ಇರುವುದು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 194 ಎ ಪ್ರಕಾರ ನಿಯಮದ ಉಲ್ಲಂಘನೆಯಾಗುತ್ತದೆ. ಇದಕ್ಕೆ ನೀವು 1000 ರೂಪಾಯಿವರೆಗೆ ದಂಡ ತೆರಬೇಕಾಗುತ್ತದೆ. ನಾಲ್ಕು ವರ್ಷ ಮೇಲ್ಪಟ್ಟ ಮಕ್ಕಳನ್ನು ಕರೆದೊಯ್ಯುವ ವೇಳೆ ಹೆಲ್ಮೆಟ್ ಕಡ್ಡಾಯವಾಗಿದೆ.
ಇದಲ್ಲದೆ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 180 ರ ಪ್ರಕಾರ, ಕಾರು ಚಾಲನೆ ಮಾಡುವಾಗ ಸಂಚಾರಿ ಪೊಲೀಸರು ಚಾಲನಾ ಪರವಾನಗಿ ಕೇಳಿದರೆ ನೀಡಬೇಕು. ನಿಮ್ಮ ಬಳಿ ಚಾಲನಾ ಪರವಾನಗಿ ಇಲ್ಲವೆಂದಾದ್ರೆ ನೀವು 5000 ರೂಪಾಯಿ ದಂಡ ನೀಡಬೇಕು. 3 ತಿಂಗಳು ಜೈಲು ಶಿಕ್ಷೆಯಾಗುವ ಸಾಧ್ಯತೆಯೂ ಇದೆ. ದಾಖಲೆಯನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಕಾಗಿಲ್ಲ. ಡಿಜಿ ಲಾಕರ್ ಅಥವಾ ಎಂ ಸಾರಿಗೆಯಲ್ಲಿ ಇಡಬಹುದು. ಪೊಲೀಸರು ಕೇಳಿದಾಗ ನಕಲನ್ನು ತೋರಿಸಬಹುದು.