ಮಳೆಗಾಲದಲ್ಲಿ ಜಲಪಾತಗಳಿಗೆ ಜೀವಕಳೆ ಬರುತ್ತದೆ. ಬೇಸಿಗೆಯಲ್ಲಿ ಬತ್ತಿ ಹೋಗುವ ಅನೇಕ ಜಲಪಾತಗಳು ಮಳೆಗಾಲದಲ್ಲಿ ಜೀವಕಳೆ ಪಡೆಯುತ್ತವೆ.
ಜಲಪಾತಗಳನ್ನು ವೀಕ್ಷಿಸಲು ಮಳೆಗಾಲ ಸೂಕ್ತವಾದ ಸಮಯ. ಹಾಗಾಗಿ ಮಳೆಗಾಲದಲ್ಲಿ ಪ್ರಕೃತಿಯ ಸೊಬಗು, ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ.
ಬೆಂಗಳೂರು ಸುತ್ತಮುತ್ತ ಅನೇಕ ಪ್ರವಾಸಿ ತಾಣಗಳಿವೆ. ಅವುಗಳಲ್ಲಿ ಮುತ್ಯಾಲ ಮಡುವು ಕೂಡ ಒಂದಾಗಿದೆ. ಮಳೆಗಾಲದಲ್ಲಿ ಜೀವಕಳೆ ಪಡೆದುಕೊಳ್ಳುವ ಮುತ್ಯಾಲ ಮಡುವು ಫಾಲ್ಸ್ ಕಣ್ತುಂಬಿಕೊಳ್ಳಲು ಹೆಚ್ಚಿನ ಪ್ರವಾಸಿಗರು ಬರುತ್ತಾರೆ.
ನೀರಿನಲ್ಲಿ ಮಿಂದೆದ್ದು ಮೈ ಮನ ಹಗುರ ಮಾಡಿಕೊಳ್ಳುತ್ತಾರೆ. ಬೆಂಗಳೂರಿನಿಂದ ಸುಮಾರು 45 ಕಿಲೋ ಮೀಟರ್ ದೂರದಲ್ಲಿದೆ ಈ ಸ್ಥಳ. ಕೆಂಗಲ್ ಹನುಮಂತಯ್ಯ ರಸ್ತೆ ಮೂಲಕ ಸಾಗಿ ಹೊಸೂರು ರಸ್ತೆ ಬಂದು ಚಂದಾಪುರ ಸರ್ಕಲ್ ಬಳಿ ಬಲಕ್ಕೆ ತಿರುಗಬೇಕು. ಆನೇಕಲ್ ನಿಂದ ಸುಮಾರು 5 ಕಿಲೋ ಮೀಟರ್ ದೂರದಲ್ಲಿ ಮುತ್ಯಾಲಮಡುವು ತಲುಪಬಹುದಾಗಿದೆ.
ಮಳೆಗಾಲದಲ್ಲಿ ಇಲ್ಲಿನ ದೃಶ್ಯವನ್ನು ನೋಡುವುದೇ ಮನಸಿಗೆ ಮುದ ನೀಡುತ್ತದೆ. ಇಲ್ಲಿನ ನೀರಿನ ಸೌಂದರ್ಯಕ್ಕೆ ಮಾರುಹೋಗದೇ ಇರಲಾರಿರಿ. ಎತ್ತರದಿಂದ ನೀರು ಧುಮ್ಮಿಕ್ಕುವ ಜಲಪಾತದಲ್ಲಿ ಮುತ್ತುಗಳು ಹರಿದು ಬರುವಂತೆ ಭಾಸವಾಗುತ್ತದೆ.
ಶಿವನ ದೇವಾಲಯ ಕೂಡ ಇಲ್ಲಿದೆ. ಇಲ್ಲಿಗೆ ಹೆಚ್ಚಿನ ಪ್ರವಾಸಿಗರು ಭೇಟಿ ಕೊಡುತ್ತಾರೆ. ನೀವೂ ಒಮ್ಮೆ ಹೋಗಿ ಮುತ್ಯಾಲ ಮಡುವು ಸೌಂದರ್ಯವನ್ನು ಕಣ್ತುಂಬಿಕೊಳ್ಳಿ.