ಹೈದರಾಬಾದ್ ಹಾಗೂ ತೆಲಂಗಾಣದ ಮುಸ್ಲಿಂ ಕುಟುಂಬದವರು ತಮ್ಮ ಹೆಣ್ಣುಮಕ್ಕಳ ಮದುವೆಯನ್ನ ತರಾತುರಿಯಲ್ಲಿ ನಡೆಸುತ್ತಿದ್ದಾರೆ. ಕಳೆದ ತಿಂಗಳು ರಾಜ್ಯಸಭೆಯಲ್ಲಿ ಚರ್ಚೆಯಾದ ಬಾಲ್ಯವಿವಾಹ ಕಾನೂನು ತಿದ್ದುಪಡಿ ಹೆಣ್ಣುಮಕ್ಕಳ ಮದುವೆ ವಯಸ್ಸನ್ನ 18 ರಿಂದ 21 ವರ್ಷಕ್ಕೆ ಏರಿಸಲು ಪ್ರಸ್ತಾಪಿಸಿರುವುದೇ ಇದಕ್ಕೆ ಕಾರಣ. ಈ ಬಿಲ್ ಇನ್ನು ಪಾಸ್ ಆಗಿಲ್ಲವಾದರು, ತೆಲಂಗಾಣದ ಮುಸ್ಲಿಂ ಪೋಷಕರಲ್ಲಿ ತಮ್ಮ ಹೆಣ್ಣುಮಕ್ಕಳ ಮದುವೆ ವರ್ಷಗಳ ಕಾಲ ಮುಂದೂಡಿಕೆಯಾಗಬಹುದು ಎಂಬ ಭಯದಲ್ಲಿ ಗಳಿಗೆ, ಕಾಲ ಏನು ನೋಡದೆ ನಿಖಾ ನೇರವೇರಿಸುತ್ತಿದ್ದಾರೆ.
ಈ ಮೊದಲೆ ನಿಗದಿಯಾಗಿದ್ದ ಮದುವೆಗಳನ್ನ ತಕ್ಷಣ ನೆರವೇರಿಸುವಂತೆ, ವರನ ಕಡೆಯವರನ್ನು ಆದಷ್ಟು ಬೇಗ ಒಪ್ಪಿಸಿ ಮುಸ್ಲಿಂ ಕಾನೂನಿನಂತೆ ಮದುವೆ ಮಾಡಿಸುತ್ತಿದ್ದಾರೆ. ನಂತರ ಈ ಮೊದಲೇ ನಿರ್ಧರಿಸಿದಂತೆ ಆರತಕ್ಷತೆ ಹಾಗೂ ವಾಲಿಮಾ ನೆರವೇರಿಸಲು ನಿರ್ಧರಿಸುತ್ತಿದ್ದಾರೆ.
ಮದುವೆಗಳು ಮಸೀದಿ, ಫಂಕ್ಷನ್ ಹಾಲ್ ಮಾತ್ರವಲ್ಲದೇ ಮನೆಗಳಲ್ಲೂ ನೆರವೇರುತ್ತಿವೆ. ಈ ಮೊದಲು ನಿಖಾಗಳು ಕೇವಲ ಸಂಜೆ ವೇಳೆ ಮಸೀದಿ ಅಥವಾ ಫಂಕ್ಷನ್ ಹಾಲ್ಗಳಲ್ಲಿ ನಡೆಯುತ್ತಿತ್ತು. ಆದರೆ ಈಗ ಒಂದು ಮಸೀದಿಯಲ್ಲಿ ಎಂಟರಿಂದ ಹತ್ತು ಮದುವೆಗಳು ನಡೆಯುತ್ತಿವೆ.
ಈ ಮೊದಲು ಮದುವೆ ಸೀಸನ್ ಗಳಲ್ಲಿ ಒಂದು ದಿನದಲ್ಲಿ ಮೂರರಿಂದ ನಾಲ್ಕು ಮದುವೆಗಳು ನಡೆಯುತ್ತಿದ್ದವು ಆದರೆ ಈಗ ಬಿಲ್ ಪಾಸ್ ಆಗಬಹುದು ಎಂದು ಹೆದರಿ ಪೋಷಕರು ಮನೆಗಳಲ್ಲಿಯೆ ಎಲ್ಲಾ ಶಾಸ್ತಗಳನ್ನ ಅನುಸರಿಸಿ, ಇಸ್ಲಾಂ ಕಾನೂನಿನಡಿಯಲ್ಲಿ ಮಕ್ಕಳ ಮದುವೆ ಮಾಡುತ್ತಿದ್ದಾರೆ ಎಂದು ಮುಸ್ಲಿಂ ಧರ್ಮ ಗುರುಗಳೊಬ್ಬರು ತಿಳಿಸಿದ್ದಾರೆ.
ಪರಿಸ್ಥಿತಿ ಯಾವ ಮಟ್ಟಕ್ಕೆ ಬಂದು ತಲುಪಿದೆ ಎಂದರೆ ಮದುವೆ ಸರ್ಟಿಫಿಕೇಟ್ ಗಳನ್ನ ಪಡೆಯಲು ವಕ್ಫ್ ಬೋರ್ಡ್ ಗಳಲ್ಲಿ ದೊಡ್ಡ ಕ್ಯೂ ಶುರುವಾಗಿದೆ. ಕೆಲ ಮುಸ್ಲಿಂ ನಾಯಕರು ಈ ತಿದ್ದುಪಡಿ ಬಿಲ್ ಪಾಸ್ ಆಗುವುದಿಲ್ಲ ಭಯಪಡಬೇಡಿ ಎಂದರೂ ಪೋಷಕರು ಆತಂಕ ಕಡಿಮೆಯಾಗಿಲ್ಲ, ಮದುವೆಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೆ ಇದೆ ಎನ್ನಲಾಗಿದೆ.