ಪಾಟ್ನಾ (ಬಿಹಾರ): ಕೇವಲ ಲಕ್ಷ್ಮಿಯನ್ನು ಪೂಜಿಸುವುದರಿಂದಲೇ ಸಂಪತ್ತು ಸಿಗುವುದಾದರೆ ಇಂದು ಮುಸ್ಲಿಮರು ಕೋಟ್ಯಾಧಿಪತಿಗಳಾಗುತ್ತಿರಲಿಲ್ಲ. ಏಕೆಂದರೆ ಮುಸ್ಲಿಮರು ಲಕ್ಷ್ಮಿಯನ್ನು ಪೂಜಿಸುವುದಿಲ್ಲ. ಆದರೆ ಅವರಲ್ಲಿ ಶ್ರೀಮಂತರಿಲ್ಲವೇ ಎನ್ನುವ ಮೂಲಕ ಬಿಹಾರದ ಬಿಜೆಪಿ ಶಾಸಕ ವಿವಾದಕ್ಕೆ ಸಿಲುಕಿದ್ದಾರೆ.
ಶಾಸಕ ಲಾಲನ್ ಪಾಸ್ವಾನ್ ಇಂಥದ್ದೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಸ್ಲಿಮರು ಸರಸ್ವತಿ ದೇವಿಯನ್ನು ಕೂಡ ಪೂಜಿಸುವುದಿಲ್ಲ. ಆದರೆ ಅವರಲ್ಲಿ ಪಂಡಿತರು, ವಿದ್ವಾಂಸರಿಲ್ಲವೆ? ಅವರು ಕೂಡ ಐಎಎಸ್, ಐಪಿಎಸ್ ಆಗಿಲ್ಲವೇ ಎಂದು ಶಾಸಕ ಪ್ರಶ್ನಿಸಿದ್ದಾರೆ.
ಆತ್ಮ ಹಾಗೂ ಪರಮಾತ್ಮ ಎಂಬುದು ಜನರ ನಂಬಿಕೆಯಾಗಿದೆ ಅಷ್ಟೇ. ನೀವು ನಂಬಿದರೆ ಅದು ದೇವತೆ, ಇಲ್ಲದಿದ್ದರೆ ಅದು ಬರೀ ಕಲ್ಲಿನ ವಿಗ್ರಹವಾಗಿರುತ್ತದೆ. ಹೀಗಾಗಿ ನಾವು ದೇವತೆಗಳನ್ನು ನಂಬಬೇಕೋ, ಬೇಡವೋ ಅನ್ನೋದು ನಮಗೆ ಬಿಟ್ಟ ವಿಚಾರವಾಗಿರುತ್ತದೆ ಎಂದಿದ್ದಾರೆ. ಈ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಆರೋಪ ಎದುರಿಸುತ್ತಿದ್ದಾರೆ.
ಲಾಲನ್ ಪಾಸ್ವಾನ್ ಭಾಗಲ್ಪುರ ಜಿಲ್ಲೆಯ ಪಿರ್ಪೈಂಟಿ ವಿಧಾನಸಭಾ ಕ್ಷೇತ್ರದ ಶಾಸಕ. ಆಂಜನೇಯ ಶಕ್ತಿಯುಳ್ಳ ದೇವರು ಎಂದು ನಂಬಲಾಗುತ್ತದೆ. ಆದರೆ ಮುಸ್ಲಿಮರು ಮತ್ತು ಕ್ರೈಸ್ತರು ಬಜರಂಗಬಲಿಯನ್ನು ಪೂಜಿಸುವುದಿಲ್ಲ. ಹಾಗಾದರೆ ಅವರು ಶಕ್ತಿಶಾಲಿಗಳಲ್ಲವೆ? ಒಟ್ಟಿನಲ್ಲಿ ನೀವು ನಂಬುವುದನ್ನು ನಿಲ್ಲಿಸಿದ ದಿನ ಇವೆಲ್ಲದಕ್ಕೂ ಒಂದು ಅಂತ್ಯ ಕಾಣುತ್ತೇವೆ ಎಂದು ಪಾಸ್ವಾನ್ ತಿಳಿಸಿದ್ದಾರೆ.