ಬೆಂಗಳೂರು: ಮುಸ್ಲಿಂ ಸಮುದಾಯದ ಮೀಸಲಾತಿಯನ್ನು ಶೇಕಡ 4 ರಿಂದ 8 ಕ್ಕೆ ಹೆಚ್ಚಳ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಕರ್ನಾಟಕ ಮುಸ್ಲಿಂ ಯುನಿಟಿ ಸಂಘಟನೆ ಸಂಚಾಲಕ ಜಬ್ಬಾರ್ ಕಲಬುರ್ಗಿ, ಪತ್ರಕರ್ತ ಬಿ.ಎಂ. ಹನೀಫ್ ನೇತೃತ್ವದ ನಿಯೋಗ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರಿಗೆ ಮನವಿ ಸಲ್ಲಿಸಿದೆ.
ಸಾಮಾಜಿಕ ಶೈಕ್ಷಣಿಕವಾಗಿ ಹಿಂದುಳಿದ ಮುಸ್ಲಿಂ ಸಮುದಾಯದ ಮೀಸಲಾತಿಯನ್ನು ಶೇಕಡ 4 ರಿಂದ 8ಕ್ಕೆ ಹೆಚ್ಚಳ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಒತ್ತಾಯಿಸಲಾಗಿದೆ.
ರಾಜ್ಯ ಸರ್ಕಾರದಿಂದ ಹಿಂದೆ ನೇಮಿಸಲಾದ ಹಿಂದುಳಿದ ವರ್ಗಗಳ ಎಲ್ಲಾ ಆಯೋಗಗಳು ಮುಸ್ಲಿಮರು ತೀವ್ರ ಹಿಂದುಳಿದ ಸಮುದಾಯ ಎಂದು ಗುರುತಿಸಿದ್ದು, ಕಾಂತರಾಜ್ ಅಧ್ಯಕ್ಷತೆಯ ಆಯೋಗವು ಕರ್ನಾಟಕ ರಾಜ್ಯದಲ್ಲಿ ಮುಸ್ಲಿಮರ ಸಂಖ್ಯೆ ಶೇಕಡ 16 ರಷ್ಟು ಇದೆ ಎಂದು ಗುರುತಿಸಿದೆ.
ಜನಸಂಖ್ಯೆ ಮತ್ತು ಹಿಂದುಳಿದಿರುವುದಕ್ಕೆ ಅನುಗುಣವಾಗಿ 2 ಬಿ ವರ್ಗದ ಮೀಸಲಾತಿಯನ್ನು ಶೇಕಡ 4 ರಿಂದ ಶೇಕಡ 8ಕ್ಕೆ ಹೆಚ್ಚಳ ಮಾಡಬೇಕು. ಸಮುದಾಯದ ಸ್ಥಿತಿಗತಿ ತಿಳಿಯಲು ಪ್ರತ್ಯೇಕ ಸಮೀಕ್ಷೆ ನಡೆಸಬೇಕು ಎಂದು ಮನವಿ ಮಾಡಲಾಗಿದೆ.
ಮನವಿ ಸ್ವೀಕರಿಸಿದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು, ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.