ಉತ್ತರ ಪ್ರದೇಶದ ರಾಜಕಾರಣದಲ್ಲಿ ಮುಸ್ಲಿಂ ಜನಾಂಗದ ಸ್ಥಾನವನ್ನು ಎಐಎಂಐಎಂ ಮುಖ್ಯಸ್ಥ ಅಸಾಸುದ್ದೀನ್ ಒವೈಸಿ ಮದುವೆಯ ವಾದ್ಯಕ್ಕೆ ಹೋಲಿಕೆ ಮಾಡಿದ್ದಾರೆ.
ಕಾನ್ಪುರದಲ್ಲಿ ಈ ವಿಚಾರವಾಗಿ ಮಾತನಾಡಿದ ಒವೈಸಿ, ಉತ್ತರ ಪ್ರದೇಶದಲ್ಲಿ ಮುಸ್ಲಿಂ ಜನಾಂಗ 19 ಪ್ರತಿಶತ ಜನಸಂಖ್ಯೆ ಹೊಂದಿದ್ದರೂ ಸಹ ರಾಜಕಾರಣದಲ್ಲಿ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂದು ಬೇಸರ ಹೊರ ಹಾಕಿದ್ರು.
ಮದುವೆ ಮನೆಯಲ್ಲಿ ಇರುವ ವಾದ್ಯಕ್ಕೂ ರಾಜಕೀಯದಲ್ಲಿ ಮುಸ್ಲಿಮರಿಗೂ ಯಾವುದೇ ವ್ಯತ್ಯಾಸವಿಲ್ಲ. ಮೆರವಣಿಗೆ ಬರುವ ವೇಳೆ ವಾದ್ಯದ ಅವಶ್ಯಕತೆ ತುಂಬಾನೇ ಇರುತ್ತದೆ. ಆದರೆ ಅವರನ್ನು ಮದುವೆ ಸಮಾರಂಭದಿಂದ ಹೊರಗಡೆಯೇ ಇಡಲಾಗುತ್ತದೆ ಎಂದು ಒವೈಸಿ ಹೇಳಿದ್ದಾರೆ.
ಆದರೆ ಇನ್ಮುಂದೆ ಮುಸ್ಲಿಮರು ವಾದ್ಯದಂತೆ ಬಳಕೆಯಾಗಬಾರದು. ಪ್ರತಿಯೊಂದು ಜಾತಿಗೂ ಒಬ್ಬ ನಾಯಕನಿದ್ದಾನೆ. ಆದರೆ ಮುಸ್ಲಿಮರಿಗೆ ಮಾತ್ರ ಯಾವುದೇ ನಾಯಕನಿಲ್ಲ. ಉತ್ತರ ಪ್ರದೇಶದಲ್ಲಿ 19 ಪ್ರತಿಶತ ಜನಸಂಖ್ಯೆ ಹೊಂದಿರುವ ಹೊರತಾಗಿಯೂ ಒಬ್ಬನೇ ಒಬ್ಬ ಜನಪ್ರತಿನಿಧಿ ಕೂಡ ಮುಸ್ಲಿಂ ಜನಾಂಗದವರಲ್ಲ ಎಂದು ಓವೈಸಿ ಹೇಳಿದ್ರು.
ಉತ್ತರ ಪ್ರದೇಶದಲ್ಲಿ ಮುಸ್ಲಿಂ ನಾಯಕತ್ವ ಸೃಷ್ಟಿಸುವ ಗುರಿಯೊಂದಿಗೆ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಎಐಎಂಐಎಂ ಪಕ್ಷ ಸ್ಪರ್ಧೆ ಮಾಡುತ್ತಿರುವುದಾಗಿ ಒವೈಸಿ ಘೋಷಣೆ ಮಾಡಿದ್ದಾರೆ. ಇದರಿಂದ ಮುಸ್ಲಿಂ ಜನಾಂಗವನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ತಿದ್ದ ಅನೇಕ ಪಕ್ಷಗಳಿಗೆ ಕಳವಳ ಉಂಟಾಗಿದೆ.