ಹಾಸನ: ಕಾಲೇಜಿನಲ್ಲಿ ಗಡ್ಡ ಬೋಳಿಸುವಂತೆ ವಿದ್ಯಾರ್ಥಿಗಳಿಗೆ ಉಪನ್ಯಾಸಕರು ತಾಕೀತು ಮಾಡಿದ್ದು, ಇದಕ್ಕೆ ಒಪ್ಪದ ಮುಸ್ಲಿಂ ವಿದ್ಯಾರ್ಥಿಗಳು ಸಿಎಂಗೆ ಪತ್ರ ಬರೆದಿದ್ದಾರೆ.
ಗಡ್ಡ ಬೋಳಿಸಲು ನಿರಾಕರಿಸಿದ್ದರಿಂದ ಹಾಸನದ ಹೊಳೆನರಸೀಪುರ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಉಪಾಧ್ಯಾಯರು ಮತ್ತು ಮುಸ್ಲಿಂ ವಿದ್ಯಾರ್ಥಿಗಳ ನಡುವೆ ಸಂಘರ್ಷ ಶುರುವಾಗಿದೆ. ನಮ್ಮ ಸಂಪ್ರದಾಯದಂತೆ ಗಡ್ಡ ಬಿಡುವುದಾಗಿ ಯುವಕರು ಪಟ್ಟು ಹಿಡಿದಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಸ್ಟೂಡೆಂಟ್ಸ್ ಅಸೋಸಿಯೇಷನ್ ಮೊರೆ ಹೋಗಿದ್ದಾರೆ.
ಜಮ್ಮು ಕಾಶ್ಮೀರದಿಂದ ಓದಲು ಬಂದಿರುವ ವಿದ್ಯಾರ್ಥಿಗಳು ಗಡ್ಡ ತೆಗೆಯಲು ನಿರಾಕರಿಸಿದ್ದಾರೆ. ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ 13 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಗಡ್ಡ ತೆಗೆಯಲು ನಿರಾಕರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಮ್ಮು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ, ಮಾಜಿ ಸಿಎಂ ಮೆಹಬೂಬ ಮುಫ್ತಿ ಅವರಿಗೆ ಕುರಿತಾಗಿ ಪತ್ರ ಬರೆದಿದ್ದಾರೆ.
ನಮ್ಮ ಸಂಪ್ರದಾಯದಂತೆ ಗಡ್ಡ ಬಿಡುವುದು ನಮ್ಮ ಹಕ್ಕಾಗಿದೆ. ಈ ಬಗ್ಗೆ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿ ಎಂದು ವಿದ್ಯಾರ್ಥಿಗಳು ಸಿಎಂಗೆ ಒತ್ತಾಯಿಸಿದ್ದಾರೆ.
ಆದರೆ, ಗಡ್ಡ ಬೋಳಿಸಲು ಹೇಳಿಲ್ಲ. ಟ್ರಿಮ್ ಮಾಡಿಕೊಂಡು ಬನ್ನಿ ಎಂದು ಉಪನ್ಯಾಸಕರು ಹೇಳಿದ್ದು, ಇದಕ್ಕೆ ಮುಸ್ಲಿಂ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಕ್ಲಿನಿಕಲ್ ಲ್ಯಾಬ್ ನಲ್ಲಿ ಗಡ್ಡ ಬಿಟ್ಟುಕೊಂಡು ಭಾಗವಹಿಸಿದರೆ ಸಮಸ್ಯೆ ಆಗುತ್ತದೆ. ಹೀಗಾಗಿ ಗಡ್ಡವನ್ನು ಟ್ರಿಮ್ ಮಾಡಿಕೊಂಡು ಬರುವಂತೆ ಹೇಳಿದ್ದೇವೆ. ಎಲ್ಲ ವಿದ್ಯಾರ್ಥಿಗಳಿಗೂ ಈ ಬಗ್ಗೆ ಸೂಚನೆ ನೀಡಿದ್ದೇವೆ. ಕೇವಲ ಮುಸ್ಲಿಂ ವಿದ್ಯಾರ್ಥಿಗಳಿಗೆ ಮಾತ್ರ ಈ ಸೂಚನೆ ನೀಡಿಲ್ಲವೆಂದು ಪ್ರಾಂಶುಪಾಲರು ತಿಳಿಸಿದ್ದಾರೆ.